ದೇಸಿ ಮುನ್ನೋಟ

ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ನದಿ ಮಾತ್ರವಾಗಿದ್ದ ಸರಸ್ವತಿ ತನ್ನ ಸುದೀರ್ಘ ಯಾತ್ರೆಯಲ್ಲಿ ಎತ್ತಿದ ಅವತಾರಗಳೆಷ್ಟು. ನದಿ, ನದೀದೇವತೆ, ಅನ್ನದೇವತೆ, ಭಾಗ್ಯದೇವತೆ, ವಾಗ್ದೇವಿ, ವಿದ್ಯಾದೇವತೆ, ಕಲಾದೇವತೆ, ಜ್ಞಾನದೇವತೆ . . . ಹೀಗೆ ಹತ್ತು ಹಲವಾರು ಅವತಾರಗಳನ್ನು ಧರಿಸಿ ಮಾನವನ ಉನ್ನತಿಗೆ ಸಾಕ್ಷಿಯಾಗಿದ್ದಾಳೆ. ಸರಸ್ವತಿಯ ಉಗಮ ವಿಕಾಸ ಸ್ವರೂಪಗಳನ್ನು ಅರಿಯುವುದೆಂದರೆ ಮಾನವ ನಾಗರೀಕತೆಯು ಸಾಗಿಬಂದ ಹಾದಿಯಲ್ಲಿ ಮರುಪ್ರಯಾಣ ಮಾಡಿದಂತೆ. ಅಂತಹ ಒಂದು ಪ್ರಯತ್ನ ಸರಸ್ವತಿ : ವಿಸ್ಮಯ ಸಂಸ್ಕೃತಿ ಕೃತಿಯಲ್ಲಿ ನಡೆದಿದೆ. ಸಣ್ಣ ತೊರೆಯಾಗಿ ಪ್ರಾರಂಭವಾಗುವ ಸರಸ್ವತಿ ಸಂಶೋಧನೆ ಮಹಾನದಿಯಾಗಿ, ಮಹಾರ್ಣವವೇ ಆಗುವುದು ಈ ಕೃತಿಯ ವಿಶೇಷ.
ವಿಶೇಷವಾಗಿ, ಬೌದ್ಧ, ಜೈನ ಹಾಗೂ ವೈದಿಕ ಪರಿಕಲ್ಪನೆಗಳು, ಸಾಹಿತ್ಯ, ಶಾಸನ, ಜನಪದ, ಚಿತ್ರಕಲೆ, ಶಿಲ್ಪ ಮೊದಲಾದವುಗಳಲ್ಲಿ ಕಂಡುಬರುವ ಸರಸ್ವತಿ ಚಿತ್ರಣ, ದೇಶ-ವಿದೇಶಗಳಲ್ಲಿ ಕಾಣಸಿಗುವ ಸರಸ್ವತಿಯ ವಿವಿಧ ಹಾಗೂ ಸಮಾನಂತರ ಸ್ವರೂಪಗಳ ಅವಲೋಕನ ನಡೆಸಿರುವ ಈ ಕೃತಿ ಕನ್ನಡ ಸರಸ್ವತಿ ಹಾಗೂ ಸಂಶೋಧನಾ ಲೋಕಕ್ಕೆ ಮಹತ್ತರವಾದ ಸೇರ್ಪಡೆ. ಇದು ದೇಸಿಯ ಹೊಸ ಉತ್ಸಾಹ ಮತ್ತು ಸಾಹಸಕ್ಕೆ ಹಿಡಿದ ಕನ್ನಡಿ!

ಕಾಮೆಂಟ್‌ಗಳು