ಶ್ರೀ ಬಿ.ಆರ್. ಸತ್ಯನಾರಾಯಣರ ಮನೋಧರ್ಮ ಸಂಶೋಧನೆಗೆ ಹೇಳಿ ಮಾಡಿಸಿದಂತಿದೆ. ಭಾಷೆಯಲ್ಲಿ ನೇರ ಮತ್ತು ನಿಖರವಾದ ಅಭಿವ್ಯಕ್ತಿ ಕ್ರಮವಿದೆ. ಅನಗತ್ಯ ಊತಗಳು ಕಾಣುವುದಿಲ್ಲ. ಶೈಲಿಯು ಯಾವ ಕಾರಣಕ್ಕೂ ಆಲಂಕಾರಿಕವಾಗುವುದಿಲ್ಲ. ಹೀಗಾಗಿ ಉದ್ದಕ್ಕೂ ಪುಸ್ತಕದಲ್ಲಿ ವಿಷಯದ ನಿರ್ದುಷ್ಟತೆ ಕಂಡುಬರುತ್ತದೆ. ಸರಸ್ವತಿ ಎಂಬ ಒಂದು ಪರಿಕಲ್ಪನೆಯ ಸುತ್ತಾ ಸಮಗ್ರವಾಗಿ ಹೇಳಬಬಹುದಾದುದ್ದನ್ನೆಲ್ಲಾ ಇಲ್ಲಿ ಹೇಳಲಾಗಿದೆ ಎಂಬ ತೃಪ್ತಿ ಓದುಗರಿಗೆ ಉಂಟಾಗುವಂತೆ ಕೃತಿಯ ರಚನಾ ವಿನ್ಯಾಸ ರೂಪದಾಳಿದೆ. ಕನ್ನಡದಲ್ಲಿ ಇಷ್ಟು ಸೊಗಸಾಗಿ ಸರಸ್ವತಿ ಎಂಬ ಪರಿಕಲ್ಪನೆಯನ್ನು ಕುರಿತು ಒಂದು ಜ್ಞಾನಕೋಶವನ್ನೇ ನಿರ್ಮಿಸಿರುವ ಸಂಶೋಧಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸಬೇಕಾಗಿದೆ. ಮುಂದಿನ ಅಧ್ಯಯನಗಳು ಈ ಜ್ಞಾನಕೋಶವನ್ನು ಇನ್ನಷ್ಟು ಮತ್ತಷ್ಟು ಸಮೃದ್ಧಗೊಳಿಸುವಲ್ಲಿ ಈ ಕೃತಿ ಮೂಲ ಆಕರವಾಗಿ ನಿಲ್ಲುತ್ತದೆ. ಸಂಶೋಧನೆ ಎನ್ನುವುದು ಒಂದು ಸಾಮೂಹಿಕ ಕ್ರಿಯಾಶೀಲತೆಯಾಗಿರುವುದರಿಂದ ಸರಸ್ವತೀ ಚಿಂತನೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಗರಿಕಟ್ಟಿಕೊಳ್ಳುವುದರಲ್ಲಿ ನನಗೆ ಸಂದೇಹವಿಲ್ಲ.
ಇಂಥ ಒಂದು ಕೃತಿಯನ್ನು ಸಮರ್ಥವಾಗಿ ನಿರ್ವಹಿಸಿರುವ ಸಂಶೋಧಕರನ್ನೂ, ಇಂಥ ಒಂದು ಕೃತಿಯನ್ನು ಪ್ರಕಟಿಸಲು ಮುಂದಾಗಿರುವ ಪ್ರಕಾಶಕರನ್ನೂ ಎಷ್ಟು ಶ್ಲಾಘಿಸಿದರೂ ಕಮ್ಮಿಯೇ. ಶ್ರೀ ಬಿ.ಆರ್.ಸತ್ಯನಾರಾಯಣ ಸಂಶೋಧನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೊಸ ಪೀಳಿಗೆಯ ಒಬ್ಬ ಗಂಭೀರ ಲೇಖಕ ಎಂಬ ಮಾತನ್ನಂತೂ ಇಲ್ಲಿ ಹೇಳಲೇಬೇಕಾಗಿದೆ.
ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ