ಸಾಧಕರ ಹಾದಿ


ಸಾಧಕರ ಹಾದಿ
ಸಂಪಾಧಕರು, ಶ್ರೀ ಕೆ.ಎನ್.ಪರಾಂಜಪೆ



ಲ್ಲಿನ ೫೦ ವ್ಯಕ್ತಿ ಚಿತ್ರಗಳಲ್ಲಿ ಸಾಹಿತಿಗಳು, ಸಂಶೋಧಕರು, ಜಾನಪದ ಸಂಗ್ರಾಹಕರು, ಸಂಗೀತಗಾರರು, ಆಡಳಿತಗಾರರು ಮತ್ತು ಸಮಾಜ ಸುಧಾರಕರು ಸೇರಿದ್ದಾರೆ. ಇವರೆಲ್ಲಾ ಅಲ್ಪ ಸ್ವಲ್ಪವಾದರೂ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದವರೇ ಆಗಿದ್ದಾರೆ. ಇಂಥ ವಿದ್ಯಾಭ್ಯಾಸದ ಪರಿಣಾಮವಾಗಿ ಅವರೆಲ್ಲ ಹೊಸ ಅವಕಾಶಗಳನ್ನು ಪಡೆದುಕೊಂಡರು. ಜೊತೆಗೆ ಹೊಸ ಪರಿಕಲ್ಪನೆ ಮತ್ತು ತಂತ್ರಗಳನ್ನು ಕೂಡಾ ಕಲಿತರು. ಇವರಲ್ಲಿ ಹೆಚ್ಚಿನವರು ಸಾಂಪ್ರದಾಯಕ ಕಟ್ಟಳೆಗಳನ್ನು ಸುಧಾರಣಾವಾದಿ ನೆಲೆಯಿಂದ ವಿರೋಧಿಸಿದರು ಎಂಬುದನ್ನು ಲೇಖಕರು ಮತ್ತೆ ಮತ್ತೆ  ಈ ಕೃತಿಯಲ್ಲಿ ವಿವರಿಸಿದ್ದಾರೆ. ಉದಾಹರಣೆಗೆ ಮಂಜೇಶ್ವರ ಗೋವಿಂದ ಪೈಗಳು ಕನ್ನಡ ಕಾವ್ಯಕ್ಕೆ ಅನಿವಾರ್ಯ ಎಂದು ಭಾವಿಸಲಾದ 'ಪ್ರಾಸ' ವನ್ನು ಬಿಟ್ಟು ಬಿಡುವ ಕ್ರಾಂತಿಕಾರೀ ಧೋರಣೆ ತಳೆದರು. ಪ್ರೊ. ಹಿರಿಯಣ್ಣ, ಎಸ್.ವಿ. ಪರಮೇಶ್ವರ ಭಟ್ಟ, ಎ.ಆರ್. ಕೃಷ್ಣಶಾಸ್ತ್ರಿ , ದೇವುಡು, ತೀ.ನಂ, ಶ್ರೀಕಂಠಯ್ಯ ಮೊದಲಾದ ಮಹನೀಯರು ಸಂಸ್ಕೃತದ ಮಹಾನ್ ಗ್ರಂಥಗಳ ಬಗ್ಗೆ ಕನ್ನಡದಲ್ಲಿ ಬರೆದು ಕನ್ನಡಿಗರ ಅರಿವು ಹೆಚ್ಚಿಸಿದರು. ಸಿ.ಡಿ.ನರಸಿಂಹಯ್ಯನವರು ಆಂಗ್ಲ ಭಾಷೆಯ ಬಗ್ಗೆ ತಿಳುವಳಿಕೆ ಮೂಡಿಸಿದರು. ಕಿಟೆಲ್, ಸೇಡಿಯಾಪು, ಮುಳಿಯ, ತಿ.ತಾ. ಶರ್ಮ, ಮತ್ತು ರುದ್ರಪಟ್ನಂ ಶಾಮಾ ಶಾಸ್ತ್ರಿಗಳೇ ಮೊದಲಾದ ಪಂಡಿತ ಪರಂಪರೆಯ ವಿದ್ವಾಂಸರು ಕನ್ನಡ ಪ್ರಾಚೀನ ಪರಂಪರೆಯ ಬಗ್ಗೆ ಆಳವಾದ ಜ್ಞಾನ ಸಂಪಾದಿಸಿಕೊಂಡು ಅವನ್ನು ಆಧುನಿಕರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದರು.  ಹುಕ್ಕೇರಿ ಬಾಳಪ್ಪ ಮತ್ತು ಶ್ರೀ ಕರೀಂ ಖಾನ್ ಅವರುಗಳು ಅದುವರೆಗೆ ನಿರಾಕರಣೆಗೆ ಒಳಗಾಗಿದ್ದ ನಮ್ಮ ಮೌಖಿಕ ಪರಂಪರೆಗೆ ಹೊಸ ಜೀವ ತುಂಬಿದರು. ಯು. ಶ್ರೀನಿವಾಸ್ ಮಲ್ಯ, ಬೆನಗಲ್ ನರಸಿಂಹ ರಾವ್, ಮಿರ್ಜಾ ಇಸ್ಮಾಯಿಲ್, ಅಮ್ಮೆಂಬಳ ಸುಬ್ಬರಾಯ ಪೈ, ಕೆ. ಪಿ ಪುಟ್ಟಣ್ಣ ಶೆಟ್ಟಿ ಮೊದಲಾದವರು ಆಡಳಿತದಲ್ಲಿ ಸುಧಾರಣೆ ತರಲು ಹೋರಾಡಿದರು. ಆನಂದಿ ಬಾಯಿ ಜೋಷಿ, ನಿರಂಜನ, ದಿನಕರ ದೇಸಾಯಿ, ಎಚ್. ನರಸಿಂಹಯ್ಯ, ಎ.ಎನ್. ಮೂರ್ತಿರಾಯರೇ ಮೊದಲಾದವರು ಸಾಮಾಜಿಕ ಪ್ರಗತಿಗೆ ವೈಚಾರಿಕತೆಯ ಆಯಾಮ ನೀಡಿ ಸಮಾಜ ಜಡವಾಗದಂತಹ ಕನಸು ಕಂಡು ಅದಕ್ಕಾಗಿ ಹೆಣಗಿದರು. ಮಧುರ ಚೆನ್ನ, ಪಂಜೆ ಮಂಗೇಶರಾಯ, ಜಿ.ಪಿ. ರಾಜರತ್ನಂ, ಪು.ತಿ.ನ, ಹುಯಿಲಗೋಳ ನಾರಾಯಣ ರಾಯರು, ಕೆ.ಎನ್. ಭಟ್, ಶಿರಾಡಿಪಾಲ್, ಬೆಟಗೇರಿ ಕೃಷ್ಣ ಶರ್ಮ, ತ.ಸು. ಶಾಮರಾಯ ಮೊದಲಾದ ಮಹನೀಯರು ಹೆಚ್ಚು ಮೂರ್ತವಾಗಿ ನಾಡನ್ನು ಮತ್ತು ಭಾಷೆಯನ್ನು ಹೊಸದಾಗಿ ಕಟ್ಟುವುದಕ್ಕೆ ಜೀವ ತೇದರು. ವರದಾಚಾರ್ ರವರು ಕರ್ನಾಟಕ ಸಂಗೀತಕ್ಕೆ ಹೊಸ ಮೆರುಗು ತಂದರಲ್ಲದೆ, ಅದನ್ನು ದೇಶ-ವಿದೇಶಗಳಲ್ಲಿ ಪ್ರಚುರಪಡಿಸಿದರು. ನಾಡು ನುಡಿಯ ಅಭ್ಯುದಯಕ್ಕೆ ಇವರೆಲ್ಲರೂ ಸಲ್ಲಿಸಿದ ಸೇವೆ ಅನುಪಮವಾದುದು. 
ಹೀಗೆ ಈ ಕೃತಿಯಲ್ಲಿ ಅತ್ಯಂತ ಅರ್ಹವಾಗಿ ಸ್ಥಾನ ಪಡೆದ ಎಲ್ಲ ಮಹನೀಯರು ವಸಾಹತುಶಾಹೀ ಆಡಳಿತ ಕಾಲದಲ್ಲಿ ದಕ್ಕಿದ ಶಿಕ್ಷಣವು ತಂದಿತ್ತ ತಿಳುವಳಿಕೆಯ ಆಧಾರದಲ್ಲಿ  ನಾಡು-ನುಡಿಯನ್ನು ಹೊಸ ಕಾಲಕ್ಕೆ ಸಜ್ಜುಗೊಳಿಸುವ ಮಹಾನ್ ಕಾರ್ಯದಲ್ಲಿ ದಣಿವರಿಯದೆ ನಿರಂತರವಾಗಿ ದುಡಿದವರು. ಒಂದು ಬಗೆಯ ವಿಶಿಷ್ಟ ಎಚ್ಚರದಲ್ಲಿ, ಪರಂಪರೆಯಿಂದ ಸ್ವಲ್ಪ ದೂರ ಸರಿದ ಇವರೆಲ್ಲರೂ ತಾವೇ ಸೃಜಿಸಿಕೊಂಡ ಹೊಸಲೋಕದಲ್ಲಿ ಕೆಲಸ ಮಾಡುತ್ತಾ ೨೦ನೇ ಶತಮಾನದ ಕರ್ನಾಟಕದ ಮುಖ್ಯ ಚಿಂತನಾ ಕ್ರಮವನ್ನು ರೂಪಿಸಿದ್ದು ಚಾರಿತ್ರಿಕ ಮಹತ್ವದ ಸಂಗತಿಯಾಗಿದೆ. ಪ್ರಸ್ತುತ ಕೃತಿಯು ಈ ವಿಷಯವನ್ನು ಸೊಗಸಾಗಿ ಮನದಟ್ಟು ಮಾಡಿಕೊಡುತ್ತದೆ. 
ಗೆಳೆಯ ಪರಾಂಜಪೆಯವರು ಸರಳವಾದ ಆದರೆ ಆಕರ್ಷಕ ಭಾಷೆಯಲ್ಲಿ ಸುಲಭವಾಗಿ ಓದಬಹುದಾದ ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಅವರ ತಂದೆ ಕೆ.ಎನ್.ಭಟ್ ಶಿರಾಡಿಪಾಲರು ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಕನ್ನಡಕ್ಕಾಗಿ ದುಡಿದದ್ದನ್ನು ಕಂಡು ನಾನು ಬೆಚ್ಚಿದ್ದೇನೆ. ಈಗ  ಪರಾಂಜಪೆಯವರು ಬೆಂಗಳೂರಿನಲ್ಲಿದ್ದುಕೊಂಡು ಕನ್ನಡದ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಅವರ ಪ್ರಯತ್ನ ಅಭಿನಂದನೀಯ. 
ಇಂಥದ್ದೊಂದು ಒಳ್ಳೆಯ ಕೃತಿ ಕರ್ನಾಟಕದ ಎಲ್ಲ ಕನ್ನಡ ಶಾಲೆಗಳಲ್ಲಿ ಇರಬೇಕಾದ್ದು ಅಗತ್ಯ ಎಂದು ನಾನು  ಭಾವಿಸುತ್ತೇನೆ.

                                                                                             ಡಾ: ಪುರುಷೋತ್ತಮ ಬಿಳಿಮಲೆ

ಕಾಮೆಂಟ್‌ಗಳು