ಸಾಧನಶೀಲ

                                                  ಸಾಧನಶೀಲ
                               ಡಾ.ಎ.ವಿ. ಪ್ರಸನ್ನ ಅಭಿನಂಧನ ಸಂಪುಟ
ಕುಮಾರವ್ಯಾಸ ಪ್ರಸನ್ನ ಅವರಿಗೆ ಪರಮಪ್ರಿಯನಾದ ಕವಿ. ಆತನ ಕಾವ್ಯವನ್ನು ಅವರು ಆಳವಾಗಿ ವ್ಯಾಸಂಗ ಮಾಡಿದ್ದಾರೆ.  ಕುಮಾರವ್ಯಾಸನ ಕಾವ್ಯರಚನೆಯಲ್ಲಿ ಪಂಡಿತರನ್ನು ದಿಕ್ಕುಗೆಡಿಸಿ ಪರೀಕ್ಷಿಸುವ ಸನ್ನಿವೇಶಗಳಿವೆ. ಇಂಥ ಸಂದರ್ಭದಲ್ಲಿ ಪ್ರಸನ್ನ ಅವರು ಇತರ ವಿದ್ವಾಂಸರೊಡನೆ ಮಾತನಾಡಿ ನಿಜವಾದ ಸ್ವಾರಸ್ಯವನ್ನು ತೀರ್ಮಾನಿಸುತ್ತಾರೆ ಎಂದು ನಾನು ಕೇಳಿದ್ದೇನೆ. ಇದೊಂದು ದೊಡ್ಡ ಗುಣ. ಇದರಿಂದ ಆತ್ಮಪ್ರತ್ಯಯವುಂಟಾಗುತ್ತದೆ.
ಪ್ರಸನ್ನ ಅವರನ್ನು ಕುರಿತು ನನಗೆ ಆತ್ಮೀಯವಾದ ಭಾವನೆಗಳಿವೆ. ಕಾವ್ಯರಸದ ವ್ಯಾಖ್ಯಾನದಲ್ಲಿ ಸಹೃದಯ ಸಂವಾದ ಭಾಜಿಯಾಗಿರಬೇಕು ಎಂಬುದನ್ನು ಬಲ್ಲವರಿಗೆ ವ್ಯಾಖ್ಯಾನ ಸಾಮರ್ಥ್ಯ ಹಸ್ತಗತವಾಗುತ್ತದೆ. ಪ್ರಸನ್ನ ಅವರಿಗೆ ಅಂಥ ಸಾಮರ್ಥ್ಯ ಯಾವತ್ತೂ ದೊರಕಿದೆ. ಇದಿಷ್ಟೂ ಕಾವ್ಯದ ಮಾತಾಯಿತು.
ಸಾಮಾಜಿಕವಾಗಿ ಕೂಡ ಪ್ರಸನ್ನ ಅವರು ಉತ್ತಮ ಕಾರ್‍ಯಗಳನ್ನು ಮಾಡಿದ್ದಾರೆ. ತಮ್ಮ ಹುಟ್ಟೂರಿನ ಸುತ್ತಮುತ್ತ ಇರುವ ಹಳೆಯ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿಸಿದ್ದಾರಂತೆ. ಆಡಳಿತದಲ್ಲಿದ್ದಾಗ ಬೇಡಿ ಬಂದವರಿಗೆ ತಮ್ಮ ಕೈಲಾದ ಸಹಾಯವನ್ನು ನಿರ್ವಂಚನೆಯಿಂದ ಮಾಡಿದ್ದಾರೆ. ಇಂಥ ನಿಸ್ವಾರ್ಥಬುದ್ಧಿ, ಸುಸಂಸ್ಕೃತನ ಸದ್ಗುಣ, ಈ ವಿವರಗಳೆಲ್ಲ ಅವರ ಬಗ್ಗೆ ನನಗೆ ಅಭಿಮಾನವನ್ನು ಹೆಚ್ಚಿಸಿವೆ.
ಈ ಅಭಿನಂದನ ಸಂಪುಟದಲ್ಲಿರುವ ಲೇಖನಗಳಲ್ಲಿ ಮತ್ತೆ ಅನೇಕ ವಿವರಗಳು ಓದುಗರಿಗೆ ದೊರಕುತ್ತವೆ. ಅವೆಲ್ಲ ಓದುಗರಿಗೆ ಪ್ರಿಯವಾಗಲಿ. ಈ ಗಮಕವ್ಯಾಖ್ಯಾನದ ಸುಸಂಸ್ಕೃತ ದಾಂಪತ್ಯವು ಈ ಸದ್ವೃತ್ತಿಯಲ್ಲಿ ನೂರ್ಕಾಲ ನಿರತವಾಗಿದ್ದು, ಬಾಳಿಗೆ ಬೇಕಾದ ಸುಖ, ಶಾಂತಿ, ಸಮಾಧಾನಗಳನ್ನು ಹೊಂದಿ ಪ್ರೇಯಸ್ಸನ್ನೂ ಶ್ರೇಯಸ್ಸನ್ನೂ ಸಮಪ್ರಮಾಣದಲ್ಲಿ ಗಳಿಸಿ ಜನಪ್ರೀತಿಯ ಹೊನಲಲ್ಲಿ ಮೀಯಲಿ, ಬಾಳು ಸಾರ್ಥಕವಾಗಲಿ. ಜನಮನ್ನಣೆ ಅಪಾರವಾಗಿ ಸಲ್ಲಲಿ. ಕುಮಾರವ್ಯಾಸ ಮಿರುಗಲಿ.

ಆಗಸ್ಟ್ ೧೨, ೨೦೧೧                                                                                             ಪ್ರೊ. ಜಿ. ವೆಂಕಟಸುಬ್ಬಯ್ಯ
                                                                                                                                  ಬೆಂಗಳೂರು

ಕಾಮೆಂಟ್‌ಗಳು