ಡಾ. ವಿಜಯಾ ಸುಬ್ಬರಾಜ್ ಅವರ ಹೊಸ ಅನುವಾದಿತ ಕಾದಂಬರಿ "ಶಾಲ್ಮಲಿ"

ಶಾಲ್ಮಲಿ
ಹಿಂದಿಯ ಬಹು ಚರ್ಚಿತ ಕಾದಂಬರಿ

ದೀರ್ಘ ಅನ್ವೇಷಣೆಯ ನಂತರ, ಶಾಲ್ಮಲಿಗೆ ತನ್ನೊಳಗಿನ ಹೆಣ್ಣು ಅರ್ಥವಾದಳು. ಅವಳಿಗೆ ಏನು ಬೇಕಾಗಿದೆ ಅನ್ನುವುದನ್ನು ಗುರುತಿಸಿದ ನಂತರ ಜೀವನದ ಹಾದಿಯಲ್ಲಿ ಆತ್ಮವಿಶ್ವಾಸದೊಂದಿಗೆ ನಡೆದಳು. ಅವಳಿಗೆ ನಂಬಿಕೆಯಿತ್ತು. ನರೇಶ ಕೂಡಾ ಭಾವನಾ ಜಗತ್ತಿನಿಂದ ಹೊರಗೆ ಬಂದು ಜೀವನದ ದೃಢವಾದ ನೆಲದ ಮೇಲೆ ಹೆಜ್ಜೆಯೊಂದಿಗೆ  ಹೆಜ್ಜೆ ಹಾಕುವ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾನೆ ಎಂದು. ಅವನಾಗಿ ಅವನು ಕಂಡುಕೊಳ್ಳಲಿಲ್ಲವಾದರೆ ತಾನೇ ಅವನ ಕೈಯನ್ನು ಗಟ್ಟಿಯಾಗಿ ಹಿಡಿದರೆ ಆಯಿತು. ಜೊತೆಯಾಗಿಯೇ ಬಿಡುತ್ತಾನೆ. ಇಷ್ಟವಿರಲಿ, ಇಲ್ಲದಿರಲಿ! ಆಗ ಹೊಂಬೆಳಕಿನ ಬದುಕು ಅವನಿಗೆ ಪ್ರಿಯವಾಗುವುದು. ಮನಸ್ಸಿನ ಗಂಟುಗಳನ್ನು ಬಿಚ್ಚಿ, ಸ್ತ್ರೀ-ಪುರುಷ, ಗಂಡ-ಹೆಂಡತಿ ಸಂಬಂಧಗಳನ್ನು ಹೊಸ ನೆಲೆಗಟ್ಟಿನ ಮೇಲೆ ಭಾವಿಸುತ್ತಾನೆ. ಹಿಂದಿನದಕ್ಕಿಂತ ವಿಸ್ತಾರವಾದದ್ದನ್ನು ಕಾಣುತ್ತಾನೆ. ಅಲ್ಲಿ ವಿಚಾರಗಳಿಗೆ ತನ್ನದೇ ಆದ ರೀತಿಯೊಂದು ಇರುತ್ತದೆ. ಮುಕ್ತ ಪರಿಸರವೊಂದು ಸಿದ್ಧವಾಗಿರುತ್ತದೆ.

ದಿನ ಕಳೆಯಿತು. ಶಾಲ್ಮಲಿಯ ಒಳಗಿದ್ದ ಹೆಣ್ಣು ಒಂದೊಂದು ಆಘಾತ ಬಿದ್ದಾಗಲೂ ಬಂಡೇಳುತ್ತಿದ್ದಳು. ಆದರೆ ನಿಜವಾದ ಶಾಲ್ಮಲಿ ಮರ್ಯಾದೆಯ ಮುಖವಾಡ ಧರಿಸಿ ಒಳಗನ್ನು ಹತ್ತಿಕ್ಕುತ್ತಲೇ ಇದ್ದಳು. ಎಷ್ಟೇ ಪ್ರಯತ್ನಿಸಿದರೂ ಪ್ರತಿಸಲವೂ ಹೂಂಕರಿಸಿ ಸೆಟೆದು ನಿಲ್ಲುತ್ತಿದ್ದಳು. ಶಾಲ್ಮಲಿಯ ಎರಡೂ ವ್ಯಕ್ತಿತ್ವಗಳು ಪರಸ್ಪರ ಒಂದರೊಡನೊಂದು ಮುಖಾ ಮುಖಿಯಾಗಿ, ಒಂದನ್ನು ಮತ್ತೊಂದು ಪರಾಜಿತಗೊಳಿಸಲು ಯೋಚಿಸುತ್ತಿದ್ದವು. ಸಂಘರ್ಷದ ಹೊಡೆತ ತಾಳಲಾರದೆ ದೈಹಿಕ ದೌರ್ಬಲ್ಯದಿಂದಾಗಿ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದಳು. ಕರಗುತ್ತಿದ್ದ ಆಕ್ರೋಶದ ಬೆಂಕಿ ಅವಳ ನರಗಳು ಸಿಡಿಯುವಂತೆ ಮಾಡುತ್ತಿತ್ತು. ಬಹಳ ಹೊತ್ತು ಹಾಗೆಯೇ ಮಲಗಿ ಯೋಚಿಸುತ್ತಿದ್ದಳು. ಮುಂದಿನ ಬದುಕಿನ ಬಗ್ಗೆ ಕಲ್ಪಿಸಿಕೊಳ್ಳುತ್ತಿದ್ದಳು. ಆತ್ಮಹತ್ಯೆಯ ಯೋಚನೆ ಬಂತು. ಅವಳ ಕ್ರೋಧ ಕ್ರಮೇಣ ಶಾಂತವಾಗತೊಡಗಿತು. ನರೇಶನ ಬಗ್ಗೆ ಯೋಚಿಸಿದಾಗ, ಬಿಕ್ಕಿ ಬಿಕ್ಕಿ ಅಳುತ್ತಿರುವ ಅಪ್ಪ ಅಮ್ಮರನ್ನು ನೆನಪಿಸಿಕೊಂಡಾಗ ಕ್ರೋಧ ಭುಗಿಲೇಳುತ್ತಿತ್ತು. 

ಕಾಮೆಂಟ್‌ಗಳು