ಧರೆ ಹೊತ್ತಿ ಉರಿದಾಗ ಭಾರತ ವಿಭಜನೆಯ ದುರಂತ ಕಥೆಗಳು

ಧರೆ ಹೊತ್ತಿ ಉರಿದಾಗ  
ಭಾರತ ವಿಭಜನೆಯ ದುರಂತ ಕಥೆಗಳು
ರಾಹು (ಆರ್.ಕೆ ಹುಡುಗಿ)


ನಾನು ಹಿಂದೂವಾಗಿ ಹುಟ್ಟಿದ್ದೇನೆ ಎಂಬುವುದು ನಿಸ್ಸಂಶಯ ಅದನ್ನು ಯಾರೂ ಬದಲಿಸಲಾರರು. ಆದರೆ ನಾನು ಒಬ್ಬ ಮುಸ್ಲಿಮನೂ ಆಗಿದ್ದೇನೆ. ಯಾಕೆಂದರೆ, ನಾನೊಬ್ಬ ಒಳ್ಳೆಯ ಹಿಂದೂವಾಗಿದ್ದೇನೆ. ಅಂತೆಯೇ ನಾನೊಬ್ಬ ಫಾರ್ಸಿ ಕೂಡ; ಹಾಗೆಯೇ ನಾನೊಬ್ಬ ಕಿಶ್ಚಿಯನ್ನನೂ ಆಗಿದ್ದೇನೆ.
                                     - ಮಹಾತ್ಮಗಾಂಧೀ, ೩೯ನೇ ಮೇ ೧೯೪೭.
ನನ್ನ ಒಬ್ಬ ಗೆಳೆಯ ತುಂಬಾ ಕಟುವಾದ ಭಾಷೆಯಲ್ಲಿ ನನಗೆ ಒಂದು ಪತ್ರ ಬರೆದಿದ್ದನು. ನಾನು ನನ್ನ “ಹುಚ್ಚುತನ”ವನ್ನು ಮುಂದುವರೆಸಿದ್ದೇ ಆದಲ್ಲಿ ಅದರ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ಎಂಬ ಧ್ವನಿ ಅದರಲ್ಲಿತ್ತು. ‘ಇನ್ನು ಕೆಲವೇ ದಿನಗಳಲ್ಲಿ ನೀವು ಈ ಪ್ರಪಂಚವನ್ನು ಬಿಟ್ಟು ಹೋಗಲಿರುವಿರಿ’ - ಎಂದು ಬರೆದಿದ್ದ ಅವನು, ‘ನೀವು ಎಂದಿಗೂ ಪಾಠ ಕಲಿಯೋದಿಲ್ಲವೆ? ನೀವು ನೀರಲ್ಲಿ ಮುಳುಗಿ ಸಾಯುತ್ತಿದ್ದ ಒಂದು ಚೇಳನ್ನು ರಕ್ಷಿಸಲು ಪದೇ ಪದೆ ಪ್ರಯತ್ನ ಮಾಡುತ್ತಿರುವ ಒಬ್ಬ ಮೂರ್ಖ ಸಾಧುವಿನಂತೆ ಮಾತಾಡುತ್ತೀರಿ. ಆ ಚೇಳು ಮುಳುಗಿ ಸಾಯುತ್ತಿದ್ದಾಗ, ಸಾಧು ಅದನ್ನು ರಕ್ಷಿಸುವ ಉದ್ದೇಶದಿಂದ ಅದಕ್ಕೆ ಕೈ ನೀಡುತಿದ್ದ, ಕೈ ಮುಟ್ಟುತ್ತಲೇ ಅದು ಅವನ ಕೈಗೆ ಕಡಿಯುತಿತ್ತು. ಅವನು ಮತ್ತೆ ಮತ್ತೆ ಪ್ರಯತ್ನಿಸಿದಂತೆಲ್ಲಾ ಅದು ಅವನನ್ನು ಕಡಿಯುತ್ತಲೇ ಇತ್ತು. ಹಾಗೆಯೇ ನಿಮಗೂ ಕೂಡ ನಿಮ್ಮ ಅಹಿಂಸೆಯ ಹಳೆಯ ಹಾಡಿನ ಚಾಳಿಯನ್ನು ಬಿಟ್ಟುಕೊಡಲು ಸಾಧ್ಯವಾಗದಿದ್ದರೆ ಹೋಗಲಿ, ಕೊನೆಯ ಪಕ್ಷ ಇತರರಿಗಾದರೂ ತಮ್ಮ ಹಾದಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬಾರದೆ? ನೀವೇಕೆ ಅವರ ದಾರಿಯಲ್ಲಿ ಅಡಚಣೆಯನ್ನುಂಟು ಮಾಡುತ್ತಿದ್ದೀರಿ?’
ಸಾಧು ಮತ್ತು ಚೇಳಿನ ಈ ನಿದರ್ಶನ ತುಂಬಾ ಚೆನ್ನಾಗಿದೆ. ನೀನ್ಯಾಕೆ ಆ ಚೇಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಿ? ಅದರ ಸ್ವಭಾವವೇ ಕಚ್ಚುವುದು, ಎಂದು ನಾಸ್ತಿಕನೊಬ್ಬ ಹೇಳಿದಾಗ, ಆ ಸಾಧು ಸಮಚಿತ್ತದಿಂದಲೇ ಉತ್ತರಿಸಿದ್ದನು: ‘ಕಚ್ಚುವುದು ಚೇಳಿನ ಸ್ವಭಾವವಾಗಿದ್ದರೆ, ಸರಿ, ಚೇಳು ತನ್ನ ಸ್ವಭಾವವನ್ನು ಬಿಟ್ಟು ಕೊಡಲಾರದಷ್ಟೇ? ಹಾಗಾದರೆ ನಾನು ನನ್ನ ಸ್ವಭಾವವನ್ನು ತ್ಯಜಿಸುವದು ಹೇಗೆ ಸಾಧ್ಯ? ನಾನು ಕೂಡ ಆ ಕಡಿಯುವ ಚೇಳಿನಂತಾಗಬೇಕೆ? ಪ್ರತೀಕಾರಕ್ಕಾಗಿ ಅದನ್ನು ಕೊಲ್ಲಬೇಕೆ?’
                                                          - ಮಹಾತ್ಮಗಾಂಧೀ, ೧೩ನೇ ಜೂನ್ ೧೯೪೭.
ಪ್ರಪಂಚದ ವಿವಿಧ ಭಾಗಗಳಿಂದ ಜನ ಸಾಲು ಸಾಲುಗಟ್ಟಿ ಭಾರತಕ್ಕೆ ಬಂದರು. ಹಾಗೆ ಬಂದ ಎಲ್ಲರೂ ಇಲ್ಲಿಯೇ ತಮ್ಮ ಆವಾಸ ಕಂಡುಕೊಂಡು ನೆಲೆಯೂರಿ ನಿಂತರು. ತತ್ವರಿಣಾಮವಾಗಿ ಆಗ ಭಾರತ ಜನ್ಮ ತಾಳಿತು.
                                         - ಫಿರಾಖ್ ಗೋರಖ್‌ಪುರಿ
ಭಾರತೀಯ ಉಪಖಂಡದ ವಿಭಜನೆಯು ನಮ್ಮ ಇತ್ತೀಚಿನ ಇತಿಹಾಸದಲ್ಲಿಯೇ ಅತ್ಯಂತ ಆಘಾತಕಾರಿ ಅನುಭವವನ್ನುಂಟು ಮಾಡಿದ ಏಕೈಕ ಘಟನೆ; ವಿಭಜನೆಯ ಸಂದರ್ಭದಲ್ಲಿ ಹೊರಹೊಮ್ಮಿದ ಹಿಂಸೆ ಹಿಂದೆಂದೂ ಕಂಡರಿಯದಂಥದ್ದು; ಅನಿರೀಕ್ಷಿತವಾಗಿ ಬಂದೆರಗಿದ ಅದು ಅತ್ಯಂತ ಅನಾಗರಿಕ ಸ್ವರೂಪದ್ದು. ಯಾರೋ ನಾಲ್ಕು ಜನ ಪುಂಡು ಪೋಕರಿಗಳಿಂದ ಪ್ರಚೋದಿತವಾದ ಗಲಭೆ, ಹಿಂಸೆಯ ಪರಿಣಾಮವಾಗಿ ಸಾಮಾನ್ಯ ಹಿಂದೂ, ಮುಸ್ಲಿಮ್, ಮತ್ತು ಸಿಖ್ಖರು ಪರಸ್ಪರರ ಮೇಲೆ ಹರಿಬಿಟ್ಟ ಪ್ರತೀಕಾರದ ವಿಷ ನಮ್ಮ ಸಾಮಾಜಿಕ ಶ್ರದ್ಧೆಯ ಸೂಕ್ಷ್ಮತೆಯನ್ನೇ ಹಾಳುಗೆಡವಿತು; ನಮ್ಮ ರಾಜಕೀಯ ವಿವೇಕವನ್ನು ವಿರೂಪಗೊಳಿಸಿತು; ನೈತಿಕ ಸದಸದ್ವಿವೇಕದ ಗ್ರಹಿಕೆಯನ್ನು ವಿಕೃತಗೊಳಿಸಿತು. ಆ ದಿನಗಳ ಕರಾಳ ನೆನಪು ನಮ್ಮೆಲ್ಲರ ಆತ್ಮಗಳ ಮೇಲೆ ಆಳವಾದ ಬರೆ ಎಳೆದಿದೆ. ಅಂದು ನಮ್ಮ ಹೃದಯದಲ್ಲಿ ಹೊಕ್ಕ ಸಂಕಟ ಇವತ್ತಿಗೂ ಕೂಡ ನಮ್ಮೊಳಗಿನ ಹುಚ್ಚು ವರ್ತನೆಯನ್ನು, ವಿಚಾರಹೀನ ನಡೆ-ನುಡಿಗಳನ್ನು ಬಡಿದೆಬ್ಬಿಸುತ್ತಲೇ ಇದೆ.
ವಿಭಜನೆ ಸೃಷ್ಟಿಸಿದ ನಿಜವಾದ ದು:ಖವೆಂದರೆ ಅದು ನಮ್ಮ ದೀರ್ಘವಾದ, ಸಮುದಾಯಿಕ ಸಮಭಾವವನ್ನು ಸೃಷ್ಟಿಸಿದ್ದ ಚರಿತ್ರೆಯನ್ನು ಏಕಾಏಕೀ ಕೊನೆಗೊಳಿಸಿದ್ದುದು. ಹಾಗೆಂದ ಮಾತ್ರಕ್ಕೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಬಂಧಗಳು ಯಾವಾಗಲೂ ಸಂಶಯಾತೀತವಾಗಿಯೇ ಇದ್ದವು; ಅಲ್ಲಿ ಅಪನಂಬಿಕೆಗೆ ಎಳ್ಳಷ್ಷು ಅವಕಾಶವಿರಲಿಲ್ಲ ಅಥವಾ ಅವರು ಪರಸ್ಪರರ ಬದುಕಿನ ರೂಢಿ ಆಚಾರ-ವಿಚಾರಗಳನ್ನು ಉದ್ವಿಗ್ನತೆಯಿಂದ ತಿರಸ್ಕರಿಸುತ್ತಿರಲ್ಲಿಲ್ಲ ಎಂದೇನೂ ಅಲ್ಲ. ಅವರ ಮಧ್ಯ ಆಗಾಗ ಕದನ ಕಾಳಗಗಳು ಕಾಣಿಸಿಕೊಂಡದ್ದೂ ಇದೆ. ಅವು ಕೆಲವೊಮ್ಮೆ ತುಂಬಾ ತೀವ್ರ ಸ್ವರೂಪ ಪಡೆದು, ಪರಸ್ಪರರ ದೂಷಣೆ ಕೊಲೆ, ಸುಲಿಗೆಳಿಗೆ ದಾರಿಮಾಡಿಕೊಟ್ಟಿದ್ದು ಇದೆ. ಅವುಗಳನ್ನು, ಕೇವಲ ಸಾಂದರ್ಭಿಕ ಕಿಡಿಗೇಡಿತನದಿಂದ ಕಾಣಿಸಿಕೊಂಡ ತಾಕಲಾಟಗಳೆಂದು ನಿರ್ಲಕ್ಷಿಸಿ ಬಿಡುವಂತಿರಲಿಲ್ಲ! ಆದರೆ, ಸದುದ್ದೇಶಪೂರ್ವಕವಾಗಿ ಕಾಣಿಸಿಕೊಳ್ಳುತ್ತಿದ್ದ ಅಂಥ ದುರ್ಭಾವದ ಚಟುವಟಿಕೆಗಳು ಕೋಮು ಉನ್ಮಾದದ ಕ್ಷಣಗಳು ತೀರ ಚಿತ್ತಾಗಿ ಕಾಣಿಸಿಕೊಳ್ಳುತ್ತಿದ್ದವು. ಜೊತೆಗೆ ಅವು ತುಂಬಾ ಕ್ಷಣಿಕವಾಗಿರುತ್ತಿದ್ದವು. ಸಹಬಾಳ್ವೆಯ ಅನುಭವ ಸಾಕಷ್ಟು ಭದ್ರವಾಗಿತ್ತು. ಆಗಾಗ ಪರಸ್ಪರ ಕಾದಾಡಿದರೂ, ಎರಡು ಸಮುದಾಯಗಳ ನಡುವಿನ ಕರ್ಷಣವನ್ನು ಕೆಲವೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಅತಿರೇಕಗಳನ್ನು ಅನತಿ ಕಾಲದಲ್ಲಿಯೇ ನಿಯಂತ್ರಿಸಲು ಸಾಧನ ಮಾರ್ಗಗಳನ್ನು ಪೂರೈಸಬಲ್ಲಷ್ಟು ಬಲವತ್ತರವಾಗಿತ್ತು, ಪರಸ್ಪರ ಸಹಬಾಳ್ವೆಯ ಸದ್ಭಾವದ ಸಂಬಂಧ. ಸಾಮುದಾಯಿಕ ಐಕ್ಯತೆಯ ಬೇರುಗಳು ಜನಸಾಮಾನಸದ ಆಳಕ್ಕೆ ಇಳಿದಿದ್ದವು. ಆದ್ದರಿಂದಲೇ ಸಮುದಾಯಗಳ ನಡುವಿನ ಸಂಬಂಧ ಆಗಾಗ ಕಲಕಿದಂತೆ ಕಂಡರೂ, ಎರಡೂ ಸಮುದಾಯಗಳ ಬದುಕಿನ ಸಮೃದ್ಧ ವೈವಿಧ್ಯತೆಗೆ ಎಂದೂ ಗಂಭೀರವಾದ ಅಪಾಯ ಕಾಣಿಸಿಕೊಂಡಿರಲಿಲ್ಲ. ಚಿಕ್ಕ ಪುಟ್ಟ ಗಲಭೆ, ಮನಸ್ತಾಪಗಳ ನಂತರವೂ ಹಿಂದೂಗಳು ದರ್ಗಾಗಳಿಗೆ ತಮ್ಮ ಭಕ್ತಿ, ಶೃದ್ಧೆಯ ಸಮರ್ಪಣೆಯನ್ನು ಎಂದೂ ನಿಲ್ಲಿಸುತ್ತಿರಲ್ಲಿಲ್ಲ. ಹಾಗೆಯೇ ಮುಸ್ಲಿಮ್‌ರು ಕೂಡ ಹಿಂದುಗಳ ಹಬ್ಬ-ಹರಿದಿನಗಳಲ್ಲಿ ಭಾಗವಹಿಸುವುದನ್ನು ಮುಂದುವರೆಸುತ್ತಿದ್ದರು. ಎರಡೂ ಸಮುದಾಯಗಳ ವ್ಯಾಪಾರಿಗಳು ರಾಗದ್ದೇಷರಹಿತವಾಗಿ ಎಲ್ಲರೊಂದಿಗೂ ತಮ್ಮ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ವ್ಯವಹಾರಿಕ ಕೊಡು-ಕೊಳ್ಳುವಿಕೆಗೆ, ಸರಕು-ಸೇವೆಗಳ ವಿನಿಮಯಕ್ಕೆ ಯಾವುದೇ ಬಾಧೆ ಬರುತ್ತಿರಲಿಲ್ಲ. ಎರಡೂ ಕೋಮಿನ ಪಂಡಿತರು ಪರಸ್ಪರರ ಅತ್ಯುತ್ತಮ ಸಂಪ್ರಾದಾಯ, ಪರಂಪರೆಗಳ ಜ್ಞಾನ, ಮಾಹಿತಿಯನ್ನು ಯಾವುದೇ ಅಳುಕಿಲ್ಲದೆ ಅರಸುತ್ತಿದ್ದರು. ರಾಜರು, ಸಂಸ್ಥಾನಿಕರು, ತಮ್ಮ ಸೈನ್ಯಕ್ಕೆ ಸಿಪಾಯಿಗಳನ್ನು ಸೇರಿಸಿಕೊಳ್ಳುವಾಗ, ಅರೆ ಕ್ಷಣವೂ ಅವರ ಧರ್ಮದ ಬಗ್ಗೆ ಆಲೋಚಿಸುತ್ತಿರಲಿಲ್ಲ. ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿ ಧರ್ಮಾತೀತವಾದ ನಿಲುವುಗಳನ್ನು ತಳೆಯುತ್ತಿದ್ದರು.
ಹಿಂದೂ-ಮುಸ್ಲಿಮರ ನಡುವೆ ರಾಜೀ ಸಂಧಾನವಿಲ್ಲದೆ ದ್ವೇಷದ ಚರಿತ್ರೆಯೇ ಇದ್ದರೆ ಅಥವಾ ಅವರಿಬ್ಬರ ನಡುವೆ ಎಂದೂ ಬೆಸೆಯಲಾಗದ, ದಾಟಲಾಗದ ಪರಸ್ಪರ ತಿರಸ್ಕಾರದ ಹೇಯ ಭಾವದ ಕಂದರವಿದ್ದಿದ್ದರೆ, ಅವೆಲ್ಲವೂ ಆಯಾ ಸಮುದಾಯಗಳ ಸಾಮಾಜಿಕ ಆಚಾರ ವಿಚಾರ ಮತ್ತು ಸಾಂಸ್ಕೃತಿಕ ನಡುವಳಿಕೆಗಳಲ್ಲಿ ಪ್ರತಿಫಲಿಸುತ್ತಿದ್ದವು. ಸಹಬಾಳ್ವೆಯ ನೋವು ನೈಜವಾಗಿದ್ದರೆ, ಅದು ಜನಪದರ ಕಥೆಗಳಲ್ಲಿ, ಪ್ರಸಂಗ ಪ್ರವಚನಗಳಲ್ಲಿ ವ್ಯಾಪಕವಾಗಿ ದಾಖಲೆಯಾಗುತ್ತಿತ್ತು; ಜನಪದರ ರಂಗ - ಸಂಪ್ರದಾಯಗಳಾದ “ಕಿಸ್ಸಾ”, “ತಮಾಷೆ”ಗಳಲ್ಲಿ ಜನತೆಯ ವೃತ್ತಾಂತ ಗೀತೆ-ಗಾಥೆಗಳಲ್ಲಿ ಅದು ನಮೂದಿಸಲ್ಪಡುತಿತ್ತು. ಜನಪದ ಸಾಹಿತ್ಯ ಮುಸ್ಲಿಮ್ ಅರಸರ ದಾಳಿ, ದಬ್ಬಾಳಿಕೆಗಳ ಬಗ್ಗೆ, ಅವರು ತೊಡಗಿದ್ದ ವಿಧ್ವಂಸನಕಾರಿ ಚಟುವಟಿಕೆಗಳ ಬಗ್ಗೆ ಅಥವಾ ಹಿಂದೂಗಳ ಅಸಹಿಷ್ಣುತೆ, ಪ್ರತಿಭಟನೆ ಇತ್ಯಾದಿಗಳ ಬಗ್ಗೆ ಸಾಕಷ್ಟು ಹೇಳುತ್ತದೆಯಾದರೂ ಅಲ್ಲಿ ಎರಡು ಸಮುದಾಯಗಳ ನಡುವೆ ಎಂದಾದರೂ ದಳ್ಳುರಿ ಭುಗಿಲೆದ್ದುದ್ದರ ಕುರಿತು ಯಾವುದೇ ವಿವರಣೆ, ಆಖ್ಯಾಯಿಕೆಗಳು ಕಾಣಸಿಗುವುದಿಲ್ಲ. ಎರಡೂ ಸಮುದಾಯಗಳ ಜನಸಾಮಾನ್ಯರ ಬದುಕಿನ ಸಾಮರಸ್ಯ, ಸೌಹಾರ್ದತೆ ಕೆಡಿಸಿದಂಥ, ಪರಸ್ಪರರ ಅವಲಂಬನೆಯ ಬದುಕಿನ ವ್ಯವಸ್ಥೆಗೇ ಗಂಭೀರ ಅಪಾಯ ತಂದೊಡ್ಡಿದಂಥ ಒಂದೇ ಒಂದು ಪ್ರಕರಣವೂ ದಾಖಲೆಯಾಗಿಲ್ಲ. ಉಪಖಂಡದ ವಿವಿಧ ಪ್ರಾಂತಗಳಲ್ಲಿ ಸಾಮಾನ್ಯರ ಬದುಕಿನ ಕೋಮು ಸೌಹಾರ್ದತೆಯನ್ನು ಕೆಡಿಸಿದ ಯಾವೊಂದು ಘಟನೆಯು ಜನಮಾನಸದಲ್ಲಿ ಅಳಿಸದ ನೆನಪಾಗಿ ಉಳಿದುದ್ದಕ್ಕೆ ಒಂದೇ ಒಂದು ಸಾಕ್ಷಾಧಾರ ದೊರೆಯುವುದಿಲ್ಲ. ಈ ಸಂಗತಿಯನ್ನು ಅಲ್ಲಗಳೆಯಲು ಕೆಲವರು ಸರ್ ಸೈಯದ್ ಅಹಮ್ಮದ್ ಖಾನ್‌ರ ಕೆಲವು ಬರವಣಿಗೆಗಳನ್ನು ಮತ್ತು ಬಕೀಮ ಚಂದ್ರ ಚಟರ್ಜಿಯವರ ಕಾದಂಬರಿಗಳನ್ನು ಉದಾಹರಣೆಗಳಾಗಿ ಮಂಡಿಸುತ್ತಾರೆ. ಈ ಬರವಣಿಗೆ ಮತ್ತು ಕಾದಂಬರಿಗಳು ಹಿಂದೂ ಮತ್ತು ಮುಸ್ಲಿಮ್‌ರ ಬದುಕಿನ ವಿಶಿಷ್ಟತೆ ಮತ್ತು ಆಸಕ್ತಿಗಳು ತುಂಬಾ ಭಿನ್ನವಾಗಿದ್ದವು; ಅವರಿಬ್ಬರ ಸಹಬಾಳ್ವೆ ಎಂದು ಸಾಧ್ಯವಿರಲಿಲ್ಲ ಅವರ ಮಧ್ಯೆ ಬದುಕಿನ ಸಹಚರ್ಯ, ಸೌಹಾರ್ದತೆಗೆ ಎಳ್ಳಷ್ಟೂ ಅವಕಾಶವಿಲ್ಲ ಎಂಬುದನ್ನು ಅವು ಸಾಬೀತುಗೊಳಿಸಲು ಪ್ರಯತ್ನಸುತ್ತವೆ. ಆದರೆ ಸರ್ ಸೈಯದ್ ಅಹಮ್ಮದ್ ಖಾನರ ನಂತರದ ಬರವಣಿಗೆಗಳಾಗಲಿ, ಬಂಕೀಮ ಚಂದ್ರ ಚಟರ್ಜಿಯವರ ಐತಿಹಾಸಿಕ ರೊಮ್ಯಾನ್ಸುಗಳಾಗಲಿ, ಚರಿತ್ರೆಯಲ್ಲಿ ತೀರ ಇತೀಚೆಗೆ ಕಾಣಿಸಿಕೊಂಡ ವಿದ್ಯಮಾನಗಳಾಗಿವೆ. ಜೊತೆಗೆ ಅವರಿಬ್ಬರ ಬರವಣಿಗೆಗಳು ಎಷ್ಟು ಗೊಂದಲದಿಂದ, ಅಸ್ಪಷ್ಟತೆಯಿಂದ ಕೂಡಿವೆಯೆಂದರೆ, ಅವುಗಳ ಆಧಾರದ ಮೇಲೆ ಪರಸ್ಪರ ಕೋಮು ದ್ವೇಷದ ಸಿದ್ಧಾಂತವನ್ನು ರಚಿಸಲು ಸಾಧ್ಯವೇ ಇಲ್ಲ. ಮೇಲಾಗಿ ಆ ಬರವಣಿಗೆಗಳನ್ನು ಆಯಾ ಸಮುದಾಯಗಳ ಒಳಗಿನಿಂದಲೇ ಪ್ರಶ್ನಿಸಲಾಗಿವೆ; ಗಂಭೀರವಾದ ಚಾಲೆಂಜ್‌ಗಳನ್ನು ಒಡ್ಡಲಾಗಿದೆ. ನಾವು ಈ ದೃಷ್ಟಿಯಿಂದಲೆ ಬಂಕೀಮಚಂದ್ರ ಕುರಿತು ಠಾಕೂರರ ನಿಲುವನ್ನು ಪರಿಭಾವಿಸಬೇಕು. ಬಂಕೀಮಚಂದ್ರರರು ಪ್ರತಿಪಾದಿಸಿದ ಪ್ರಾಚೀನ ಭಾರತದ ಕಾಲ್ಪನಿಕ ವೈಭವವನ್ನಾಗಲಿ-ಅಥವಾ ಭಾರತೀಯರಿಗೆ ಉಂಟಾಗಿದ್ದ ಕಾಲ್ಪನಿಕ ಅವಮಾನದ ವಿರುದ್ಧದ ದೂರುಗಳಾಗಲಿ ಅಡಿಗುಲಜ್ಜಿಯ ಕಥೆಗಳನ್ನು ಹೊಸೆಯಲು ಮಾತ್ರ ಉಪಯುಕ್ತವೆನಿಸಬಹುದು ಎಂಬ ಟಾಗೋರರ ಆಲೋಚನೆ ಗಮನಾರ್ಹವಾದದ್ದು. ಅವರು ಹೇಳುವಂತೆ, ಬಂಕೀಮಚಂದ್ರರ ಕಥೆಗಳು ಉತ್ತಮ ಮನರಂಜನೆಯ ಕಟ್ಟು ಕಥೆಗಳಾಗಬಹುದೆ ವಿನಃ ನಮ್ಮ ಬಹುಜನಾಂಗೀಯ ಮತ್ತು ಬಹುಧರ್ಮಿಯ ಸಮಾಜವನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮ ಮಾರ್ಗದರ್ಶಿಗಳಾಗಲಾರವು. ಅದೇ ರೀತಿ, ಗಾಲಿಬ್‌ರೂ ಕೂಡ ಸರ್ ಸೈಯದ್‌ರ ಐನಿ-ಅಕ್ಬರಿಯ ಒಂದು ಆವೃತ್ತಿಗೆ ಪ್ರಸ್ತಾವನೆ ಬರೆಯಲು ನಿರಾಕರಿಸಿದರು. ಯಾಕೆಂದರೆ, ಅವರ ದೃಷ್ಟಿಯಲ್ಲಿ “ಗತದ ಆರಾಧನೆ” ಒಂದು “ಉಪಯುಕ್ತ ಕೆಲಸ”ವಾಗಿರಲಿಲ್ಲ. ಮೇಲಾಗಿ, ಅವರು “ವಂಚನೆಯ ಸಂಚ”ನ್ನು ಸೃಷ್ಟಿಸಲು ಯಾವುದೇ “ಸದ್ಭುದ್ಧಿಯ ವ್ಯಕ್ತಿ”ಗೆ ಉತ್ತೇಜನ ನೀಡಲು ಬಯಸಿರಲಿಲ್ಲ.
ತೀರ ಕಂದಾಚಾರಿ ಮುಸ್ಲಿಮ್‌ರು ಕೂಡ ಸರ್ ಸೈಯದ್‌ರನ್ನು ತಿರಸ್ಕರಿಸಿದ್ದರು. ಅವರ ದೃಷ್ಟಿಯಲ್ಲಿ ಸರ್ ಸೈಯದ್ ಒಬ್ಬ ಪಾಷಂಡಿ! ಯಾಕೆಂದರೆ, “ಅಲಿಗಢ್ ಪಂಥ” ಸಾಂಪ್ರದಾಯಿಕ ಇಸ್ಲಾಮಿನ ನಂಬುಗೆ ಮತ್ತು ವಿಚಾರಗಳಿಗೆ ಅಪಾಯದ ಮೂಲವೆಂದೇ ಅವರು ಭಾವಿಸಿದ್ದರು. ನಿಜವೆಂದರೆ, ೧೯ನೇ ಶತಮಾನದ ಉದ್ದಕ್ಕೂ ಅಷ್ಟೇ ಯಾಕೆ, ೧೯೩೫ರವರೆಗೂ ಹಿಂದೂ ಮತ್ತು ಮುಸ್ಲಿಮ್ ಬುದ್ಧಿಜೀವಿಗಳ ಪ್ರಮುಖ ಕಾಳಜಿ ಪರಸ್ಪರರ ಮಧ್ಯ ಮುಕ್ತವಾದ ಚಿಂತನೆಗೆ ಪ್ರಬೋಧಪರವಾದ ಜಿಜ್ಞಾಸೆಗೆ ಅನಿರ್ಬಂಧಿತ ಅವಕಾಶ ನಿರ್ಮಿಸುವುದೇ ಆಗಿತ್ತು. ಅವರೆಂದೂ ಜನರನ್ನು ಅವರವರ ಧರ್ಮಗಳ ಸಂಕುಚಿತ ಪರಿಧಿಗಳಿಗೆ ಸೀಮಿತಗೊಳಿಸಲು ಬಯಸಲಿಲ್ಲ. ಪರಸ್ಪರರ ಬಗ್ಗೆ ತೀವ್ರವಾದ ದ್ವೇಷ, ಅಸೂಯೆಗಳಿಗೆ ನೀರೆರೆದು ಬೆಳೆಸುವ ಸಂಘಟನೆಗಳು ಅಸ್ತಿತ್ವದಲ್ಲಿದ್ದವು. ಕೋಮು ಭಾವನೆಗಳ ರಾಗದ್ವೇಷಾದಿಗಳನ್ನು ಪ್ರಚೋದಿಸುವ ಗುಂಪುಗಳಿಗೂ ಕೊರತೆಯಿರಲ್ಲಿಲ್ಲ. ಆದರೆ ಅಂತ ಸಂಘಟನೆ, ಗುಂಪುಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳ ಅಂಚಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದವು. ವಿಶಾಲ ಜನತೆಯ ಗೌರವಕ್ಕೆ ಪಾತ್ರರಾಗಿದ್ದವರು ಸಾಮಾನ್ಯವಾಗಿ, ಹಿಂದೂ-ಮುಸ್ಲಿಮ್‌ರ ಪರಸ್ಪರ ಅವಲಂಬನೆಯ ಬದುಕಿಗೆ ಮನ್ನಣೆ ನೀಡುತ್ತಿದ್ದರು; ಸಮುದಾಯಗಳ ನಡುವಿನ “ಸೌಹಾರ್ದತೆ, ಸದ್ಭಾವಗಳ ಸಂವರ್ಧನೆ”ಗೆ ತೊಡಗುತ್ತಿದ್ದವರನ್ನು ಉತ್ತೇಜಿಸುತ್ತಿದ್ದರು. ಈ ಮಾತಿಗೆ ವಿಪುಲ ನಿದರ್ಶನಗಳು ದೊರಕುತ್ತವೆ. ರಾಜಾ ರಾಮ್‌ಮೋಹನ್‌ರಾಯರು ೧೮೨೨ ರಲ್ಲಿ ಮೊದಲ ಪರ್ಷಿಯನ್ ಸುದ್ಧಿ ಪತ್ರಿಕೆಯನ್ನು (ಮಿರಾತುಲ್ ಅಕ್ಬರ್ - ಸುದ್ದಿಗನ್ನಡಿ) ಸಂಪಾದಿಸಿ ಪ್ರಕಟಿಸಿದ್ದಾಗಲಿ; ವಿವಿನ್ಷಿ ಸದ್‌ಸುಖ್ ಅವರು ೧೮೨೩ ರಲ್ಲಿ ಪ್ರಥಮ ಉರ್ದು ಪತ್ರಿಕೆ (ಜಾಮ್-ಎ-ಜದಾನ್‌ನುಮಾ-ಸ್ಫಟಿಕ ಪಾತ್ರೆಯಲ್ಲಿ ಪ್ರಪಂಚದ ಪ್ರತಿಬಿಂಬ)ಯೊಂದನ್ನು ಪ್ರಕಟಿಸಿದ್ದಾಗಲಿ; ೧೮೫೭ರ ಬ್ರಿಟಿಷ್ ವಿರುದ್ಧದ ಬಂಡಾಯದಲ್ಲಿ ಹಿಂದೂ-ಮುಸ್ಲಿಮ್ ಸೈನಿಕರು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾಗಲಿ ; ಪ್ರೇಮ್‌ಚೆಂದ್‌ರು “ಕರ್ಮಭೂಮಿ” (೧೯೩೨) ಎಂಬ ಕಾದಂಬರಿಯಲ್ಲಿ ಹಿಂದೂ-ಮುಸ್ಲಿಮ್ ಗೆಳೆಯರ ಪರಸ್ಪರ ಸಂಬಂಧ ಮತ್ತು ರಾಷ್ಟ್ರದ ಬಗ್ಗೆ ಅವರ ಕರ್ತವ್ಯದ ಕುರಿತು ಹೃದಯಂಗಮವಾಗಿ ಚಿತ್ರಿಸಿದ್ದಾಗಲಿ; ಮಹಾಕವಿ ಇಕಾಲ್ಬ್ ತನ್ನ ಬಾಲ್-ಇ-ಜಿಬ್ರಲ್ (೧೯೩೫) ಕೃತಿಯನ್ನು ಭರ್ತಹರಿಯ ಒಂದು ದ್ವಿಪದಿಯಿಂದಲೇ ಆರಂಭಿಸಿದ್ದಾಗಲಿ; ಅಥವಾ ರವೀಂದ್ರನಾಥ ಠಾಕೂರ್, ನಿಜುರುಲ್ ಇಸ್ಲಾಂ ಮತ್ತು ಹಸಂತ್ ಮೋಹನಿಯವರ ನಡುವೆ ಇದ್ದ ಆಸಕ್ತಿಗಳ ಕುರಿತ ಸಹಾನುಭೂತಿಯಾಗಲಿ ಅಥವಾ... ಹೀಗೇ ಇಂಥವರ ಹೆಸರಿನ ಪಟ್ಟಿಯನ್ನು ಬೆಳೆಸುತ್ತಲೇ ಹೋಗಬಹುದು. ವಿಭಿನ್ನ ಧರ್ಮಗಳ ಸಾಮಾಜಿಕ ನೈತಿಕ ಆದರ್ಶಗಳ ಏಕೀಕೃತ ದೇಶದ ಪರಿಕಲ್ಪನೆ ಸಾಧು-ಅಷ್ಟೇ ಅಲ್ಲ, ಸಾಧ್ಯ ಕೂಡ ಎಂದು ಬಗೆದಿದ್ದ ಇಂಥ ಮಹಾನುಭಾವರು ಸಾಕಷ್ಟು ಜನ ಕಾಣಸಿಗುತ್ತಾರೆ. ಅವರ ಈ ನಿಲುವಿಗೆ ಕಾರಣ : ಪರಸ್ಪರರ ಬಗ್ಗೆ ತಾಳುವ ಸದ್ಭಾವ ಅರ್ಥಪೂರ್ಣವಾದದ್ದು ಎಂಬುದರ ಜೊತೆಗೆ ಅದು ದೀರ್ಘ ಬದುಕಿನ ಆಚರಣೆಯಿಂದ, ಸಹ ಬಾಳ್ವೆಯ ಆದರ್ಶದಿಂದ ಹೊರಹೊಮ್ಮಿದ್ದಾಗಿತ್ತು. ಹಿಂದೂ-ಮುಸ್ಲಿಮ್‌ರ ದೈನಂದಿನ ಸಾಮಾನ್ಯ ಬದುಕು ಸ್ಥಳೀಯ ಮಟ್ಟದ್ದಲ್ಲಾಗಲಿ, ರಾಷ್ಟ್ರೀಯ ಮಟ್ಟದಲ್ಲಾಗಲಿ ೧೯೪೬ರ ವರೆಗೆ ತುಂಬಾ ಅನ್ಯೋನ್ಯವಾಗಿಯೇ ಇತ್ತು. ಅವರ ಬದುಕಿನ ರೂಢಿ ನಿಯಮಗಳು, ಅಚಾರ-ವಿಚಾರಗಳು ಎಷ್ಟು ಸಮೃದ್ದವಾಗಿ ಪರಸ್ಪರ ಹೆಣೆದುಕೊಂಡಿದ್ದವೆಂದರೆ, ಒಂದನ್ನುಳಿದು ಮತ್ತೊಂದರ ಬಗ್ಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಹಾಗೆಂದೇ ವಿಭಜನೆಯ ಬಗ್ಗೆ, ಅದು ಉಕ್ಕಿಸಿದ ಭೀತಿಯ ಬಗ್ಗೆ ಬರೆಯಲಾಗಿರುವ ಹೆಚ್ಚು ಕಡಿಮೆ ಎಲ್ಲ ಕಥೆಗಳಲ್ಲಿ ಒಂದೇ ಸಾಮಾನ್ಯ ಭಾವ ಅಭಿವ್ಯಕ್ತಗೊಂಡಿರುವದನ್ನು ಕಾಣುತ್ತೇವೆ. ಅನಿರ್ವಚನೀಯ ಅತುಲ ದಿಗ್ಬ್ರಾಂತತೆಯೇ ಹಾಗೆ ಹೊರಹೊಮ್ಮಿದ ಸ್ಥಾಯಿ ಭಾವವಾಗಿದೆ. ವಿಭಜನೆ, ಪರಸ್ಪರ ವಿಯೋಗ, ಮಾರಣ ಹೋಮ ಇತ್ಯಾದಿಗಳಿಗೆ ಯಾವುದೇ ಚಾರಿತ್ರಿಕ ಅಥವಾ ಸಾಮಾಜಿಕ ಕಾರಣಗಳೇ ಇರಲಿಲ್ಲವೇನೋ ಎಂಬಂತೆ ಹೆಚ್ಚಿನ ಲೇಖಕರು ಆಗ ನಡೆದ ಘಟನೆಗಳನ್ನು ಬೆರಗಿನಿಂದ ಕಂಡಿದ್ದಾರೆ. ತಮ್ಮ “ಮನೆ” ತಮ್ಮ “ಬಸ್ತಿ” ಎಂದು ಕರೆಯಲ್ಪಡುತ್ತಿದ್ದ ಎಲ್ಲವೂ ನೋಡನೋಡುತ್ತಿದ್ದಂತೆಯೇ ಕಗ್ಗಲ್ಲ ರಾಶಿಯಾಗಿ ಪರಿಣಮಿಸಿದ್ದನ್ನು ತಮ್ಮ ಸಾಮೂಹಿಕ ಆಚಾರ-ವಿಚಾರಗಳು ರೂಢಿ-ಸಂಪ್ರದಾಯಗಳು, ಕಥೆ-ಗೀತೆಗಳು, ಗಿಡ-ಮರ, ಹಕ್ಕಿ-ಪಕ್ಷಿ-ಎಲ್ಲವುಗಳಿಗೂ ಕಪ್ಪು ಮಸಿ ಅಂಟಿಕೊಂಡಿತೋ, ಎಲ್ಲವೂ ಹೊಗೆ-ಬೂದಿಗಳ ಘಾಟು ವಾಸನೆಯಲ್ಲಿ ಮುಳುಗಿ ಹೋದವೋ, ರಕ್ತದಲ್ಲಿ ತೊಯ್ದು ಹೋದವೋ ಎಂದು ದಿಗಿಲುಗೊಂಡು ನೋಡಿದ್ದಾರೆ.
ವಿಭಜನೆಯ ಬಗ್ಗೆ ನನ್ನ ಕಾಳಜಿ ಕುತೂಹಲಗಳು ಬಹು ಹಿಂದಿನಿಂದಲೇ ಬಂದಿವೆ. ನನ್ನ ಕುಟುಂಬದವರ ನೆನಪುಗಳು, ಸ್ವತಃ ನಾನೇ ಎದುರಿಸಿ ಅನುಭವಿಸಿದ ಭೀತಿಯೊಂದಿಗೆ ನನ್ನ ಈ ಕಾಳಜಿ ಅವಿನಾಭಾವ ಸಂಬಂಧ ಹೊಂದಿದೆ. ಉತ್ತರ ಭಾರತದ ಮತ್ತು ಪೂರ್ವ ಭಾಗಗಳ ನನ್ನ ತಲೆಮಾರಿನ ಪ್ರತಿಯೊಬ್ಬರ ಬಾಲ್ಯದ ಅನುಭವಗಳಂತೆ, ನನ್ನ ಮನಸ್ಸಿನ ಮೇಲೂ ೧೯೪೭-೧೯೪೮ರ ಘಟನೆಗಳು ಅಚ್ಚಳಿಯದ ಮುದ್ರೆಯನ್ನೊತ್ತಿವೆ. ಅದು ನಾನು ಕಂಡ ಗಲಭೆಗಳ ಕ್ರೌರ‍್ಯ, ಕೇಳಿದ ಆರ್ತ ಚೀತ್ಕಾರಗಳು ಇವತ್ತಿಗೂ ನನ್ನ ಪ್ರಜ್ಞೆಯ ಆಳದಲ್ಲಿ ನೆಲೆ ನಿಂತಿವೆ. ಅವು ನನ್ನ ಮನೆಯ ಸುರಕ್ಷಿತ ಗೋಡೆಗಳಾಚೆಗೆ ನಡೆಯಬಹುದಾಗಿದ್ದ ಕರಾಳ ಪೈಶಾಚಿಕ ಘಟನೆಗಳ ಬಗ್ಗೆ, ದುರ್ದೈವಿಗಳಿಗೆ ಕಾದುಕುಳಿತ್ತಿದ್ದ ಬೀಭಿತ್ಸ ಸಾವಿನ ಬಗ್ಗೆ ಮುನ್ಸೂಚನೆ ನೀಡಿದ್ದವು. ದೇಶದ ವಿಭನೆಯ ಕುರಿತು ಈ ಕಥೆಗಳನ್ನು ಸಂಕಲ್ಪಿಸಿ ಹೊರತರುವ ನನ್ನ ಈ ಉದ್ದೇಶದ ಹಿಂದೆ ಗತದ ಭೂತವನ್ನು ಹೊಡಿದೆಬ್ಬಿಸುವ ಬಯಕೆಯಿಲ್ಲ. ಬದಲಾಗಿ, ನನ್ನ ಕಾಲ ಮತ್ತು ದೇಶದ ಚರಿತ್ರೆಯ ಸಂದರ್ಭದಲ್ಲಿ ಒಂದು ನೈತಿಕ ಶೋಧನೆಗೆ ನಾಂದಿ ಹಾಡುವ ವಾಂಛೆಯಿದೆ. ಅದು ಈ ಸಂಕಲನದ ಮೂಲಕ ಈಡೇರುತ್ತದೆ ಎಂಬ ಭರವಸೆ ನನಗಿದೆ.
ಕೋಮುಗಲಭೆಯ ಕ್ರೌರ‍್ಯ ಕುರಿತ ನನ್ನ ಮೊಟ್ಟ ಮೊದಲ ಅನುಭವ ೧೯೪೮ರ ಸುಡು ಬೇಸಿಗೆಯ ಒಂದು ದಿನ ದೆಹಲಿಯಲ್ಲಿ ಸಂಭವಿಸಿದ ಘಟನೆಯನ್ನು ಕುರಿತದ್ದು. ಅದರ ವಿವರ ನನ್ನ ಸ್ಮೃತಿಯಲ್ಲಿ ಇವತ್ತಿಗೂ ಸ್ಥಾಯಿಗೊಂಡಿದೆ. ಉತ್ತರ ಭಾರತದ ಬೇಸಿಗೆಯ ಎಲ್ಲ ದಿನಗಳಂತೆ ಅಂದು ಕೂಡ ಯಾವುದೇ ವಿಶೇಷತೆಯಿಲ್ಲದ ದಿನ. ಎಂದಿನಂತೆ ಸೂರ್ಯ ಪ್ರಖರವಾಗಿ ಬೆಳಗುತ್ತಿದ್ದ; ಛಟ ಛಟ ಸುಡುತ್ತಿದ್ದು ಈ ಜಗದ ಜಂಜಡಿದ ಬಗ್ಗೆ ಉದಾಸೀನನಾಗಿದ್ದ. ನೊಣಗಳ ಗೊಂಯಿಗುಡುವ ಶಬ್ದ ಗಾಳಿಗೆ ಉದ್ದ ಧೂಳಿನೊಂದಿಗೆ ಮೇಳೈಸಿ ತೇಲಿಬರುತ್ತಿತ್ತು. ಟಾರ್ ರಸ್ತೆಯ ವಾಸನೆ, ಬೀದಿಯ ಹಾಸುಗಲ್ಲುಗಳ ಝಳ ಒಂದೇ ಸಮನೆ ರಾಚುತ್ತಿತ್ತು. ಸೂರ್ಯನ ಪ್ರಖರ ಬಿಸಿಲಿನ ಧಗೆಯನ್ನು ಹೀರಿಕೊಂಡು, ಬೀಸುತ್ತಿದ್ದ ಬಿಸಿಗಾಳಿಗೆ ಪ್ರತಿರೋಧ ಒಡ್ಡುವ ಉದ್ದೇಶದಿಂದ ನಮ್ಮ ಪುಟ್ಟ ಮನೆಯ ಅಂಗಳದ ಸುತ್ತ ಇದ್ದ ಎತ್ತರವಾದ ಗೋಡೆಗೆ ಸುಣ್ಣ ಬಳಿಯಲಾಗಿತ್ತು. ಮನೆಯ ಮುಂಭಾಗದಲ್ಲಿದ್ದ ಪ್ರವೇಶ ದ್ವಾರಕ್ಕೆ ಒಂದು ಚಿಕ್ಕ ಹಸಿರು ಬಣ್ಣದ ಬಾಗಿಲಿತ್ತು. ಅದಕ್ಕೆ ಕಪ್ಪು ಸರಪಳಿಯ ಕೊಂಡಿ, ಕೀಲಿ ಇದ್ದವು. ಬಾಗಿಲಿನ ಮುಂದಿದ್ದ ಕೆಲವು ವರ್ಣಹೀನ ಮೆಟ್ಟಲಿಳಿದು ಕೆಳಗೆ ಹೋದರೆ, ಎಲೆಗಳಿಂದಾವೃತವಾಗಿದ್ದ ಸಮತ್ತಟ್ಟಾದ ರಸ್ತೆ, ಈ ಎಲ್ಲ ವಿವರಗಳನ್ನು ನಾನು ಬಹುಮುಖ್ಯ ಎಂದು ಭಾವಿಸಿ ಇಲ್ಲಿ ದಾಖಲಿಸಲು ಕಾರಣವಿಲದೇ ಇಲ್ಲ, ನಾನು ಆ ಘಟನೆಯನ್ನು ಯಥಾವತ್ತಾಗಿ ನೆನಪಿಟ್ಟಿದ್ದೇನೆ; ಅದರಲ್ಲಿ ಎಳ್ಳಷ್ಟೂ ಕಲ್ಪನೆಯನ್ನು ಬೆರೆಸಿ ಹೇಳುತ್ತಿಲ್ಲ ಎಂಬುದಕ್ಕೆ ಆಧಾರವಾಗಿ ಈ ಎಲ್ಲ ವಿವರಗಳನ್ನು ಮಂಡಿಸುತ್ತಿದ್ದೇನೆ. ಜೊತೆಗೆ ಈ ನೈಜ, ವಾಸ್ತವ ವಿವರಗಳ ಮೂಲಕ ನನ್ನ ಕಲ್ಪನೆಗೆ ಒಂದು ತಡೆಗೋಡೆಯನ್ನು ನಿರ್ಮಿಸುತ್ತಿದ್ದೇನೆ. ನನ್ನ ನೆನಪು, ಭ್ರಮೆ-ವಿಭ್ರಮೆಗಳ ಲೋಕಕ್ಕೆ ಕಾಲಿಡದಂತೆ. ಸೀಮಾ ಗೋಡೆಗಳನ್ನು ರಚಿಸುತ್ತಿದ್ದೇನೆ.
ನಾನು ಕೀಲಿ ತೆಗೆದು ಬಾಗಿಲ ತೆರೆದು ಹೊರಗೆ ನೋಡಿದಾಗ, ನಮ್ಮ ಬಾಗಿಲ ಮುಂದಿನ ಮೆಟ್ಟಿಲುಗಳ ಮೇಲೆ ಒಬ್ಬ ವ್ಯಕ್ತಿಯ ದೇಹ ಬಿದ್ದಿರುವುದು ಕಾಣಿಸಿತು. ಅವನು ಮುಖ ಕೆಳಗಾಗಿ ಬಿದ್ದುಕೊಂಡಿದ್ದನು. ಅವನ ಕಾಲಬಳಿ ಕೈ ಚೀಲ ಬಿದ್ದಿತ್ತು. ಅದರ ಬಾಯಿ ತೆರೆದು ಒಳಗಿದ್ದ ಕೆಲವು ಮನೆ ಬಳಕೆಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಕೈ-ಕಾಲುಗಳು ಹೇಗೇಗೋ ಚಾಚಿಗೊಂಡಿದ್ದವು. ಅವನ ಮೈ ಮೇಲಿನ ಬಟ್ಟೆಗಳು ರಕ್ತ-ಸಿಕ್ತವಾಗಿದ್ದವು. ಅಷ್ಟೊತ್ತಿಗಾಗಲೇ ಕಡು ಬಿಸಿಲಿನಿಂದಾಗಿ ಅವನ ಚರ್ಮ ಕಪ್ಪಾಗತೊಡಗಿತ್ತು. ಇಡೀ ಓಣಿ ನಿರ್ಜನವಾಗಿತ್ತು. ಸಾಮಾನ್ಯವಾಗಿ ಕಸದ ಗುಂಡಿಗಳ ಹತ್ತಿರ ಇರುತ್ತಿದ್ದ ಬೀದಿನಾಯಿಗಳು ಕೂಡ ಇರಲಿಲ್ಲ. ಬಾಗಿಲಿನ ಕೊಂಡಿಗಳ ಹತ್ತಿರ ಇರುತ್ತಿದ್ದ ಬೀದಿನಾಯಿಗಳು ಕೂಡ ಇರಲಿಲ್ಲ. ಬಾಗಿಲಿನಕೊಂಡಿಯ ಸರಪಳಿಯ ಶಬ್ದವನ್ನು ಕೇಳಿ ನನ್ನ ತಂದೆ ಅವಸರದಿಂದ ಓಡಿಬಂದರು. ಆ ಮೇಲೆ ಅವರು ನನಗೆ ಹೇಳಿದ ಸಂಗತಿಗಳು ಇವತ್ತಿಗೂ ನನ್ನ ನೆನಪಿನಲ್ಲಿ ಹಚ್ಚ ಹಸರಾಗಿವೆ: ಅಲ್ಲಿ ಮೈತುಂಬಾ ಅನೇಕ ಗಾಯಗಳಾಗಿ ಬಿದ್ದುಕೊಂಡಿದ್ದ ಆ ವ್ಯಕ್ತಿ ಆ ದಿನ ಮುಂಜಾನೆ ನಮ್ಮ ಮನೆಯಲ್ಲಿ ಆಶ್ರಯ ಕೋರಿ ಓಡಿಬಂದಿದ್ದನು. ಅವನು ಒಬ್ಬ ಮುಸ್ಲಿಮ್ ವ್ಯಾಪಾರಿ. ಪಾಕಿಸ್ತಾನದಲ್ಲಿ ನಡೆದಿದ್ದ ರಕ್ತ ಪಾತಕ್ಕೆ ಪ್ರತಿಯಾಗಿ, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕೆಲವರು ಅವನನ್ನು ಅಟ್ಟಿಸಿಕೊಂಡು ಬಂದಿದ್ದರು. ಕಣ್ಣಲ್ಲಿ ಕೆಂಡ ಕಾರುತ್ತಿದ್ದ ಆ ಹಿಂಸಾಕಾಂಕ್ಷಿಗಳು ಅವನನ್ನು ಮುಗಿಸಬಯಸಿದ್ದರು. ನಾವು ಹಿಂದೂಗಳಾದ್ದರಿಂದ ಅವನು ಕೆಲವು ಗಂಟೆಗಳವರೆಗೆ ನಮ್ಮ ಮನೆಯೊಳಗೆ ಸುರಕ್ಷಿತವಾಗಿದ್ದನು. ಯಾರು ನಮ್ಮ ಮನೆಯ ಮೇಲೆ ಹಲ್ಲೆ ಮಾಡಲಿಲ್ಲ. ಮಧ್ಯಾಹ್ನದ ಹೊತ್ತಿಗೆ ನನ್ನ ತಂದೆ ಹೊರಗೆ ಹೋಗಿ ಓಣಿಯ ಉದ್ದಕ್ಕೂ ಅಡ್ಡಾಡಿ ಪರಿಸ್ಥಿತಿ ಶಾಂತವಾಗಿರುವುದನ್ನು, ಸುರಕ್ಷಿತವಾಗಿರುವುದನ್ನು ಖಾತ್ರಿ ಮಾಡಿಕೊಂಡು ಬಂದರು. ಆ ಮನುಷ್ಯ ಸಹಜವಾಗಿಯೇ ಹಿಂತಿರುಗಿ ತನ್ನ ಮನಗೆ ಹೋಗಲು ತುಂಬಾ ಕಾತುರನಾಗಿದ್ದನು. ನನ್ನ ತಂದೆ ಮತ್ತೊಮ್ಮೆ ಓಣಿಯನ್ನೆಲ್ಲ ಸೂಕ್ಷ್ಮವಾಗಿ ಸಮೀಕ್ಷಿಸಿ, ಎಲ್ಲವೂ ಕ್ಷೇಮವಾಗಿದ್ದುದನ್ನು ಮನಗಂಡು ಅವನು ಈಗ ಸುರಕ್ಷಿತವಾಗಿ ತನ್ನ ಮನೆಗೆ ಹೋಗಬಹುದೆಂದು ಹೇಳಿದರು. ಅವನು ಕೂಡ ತನ್ನ ಜೀವಕ್ಕೊದಗಿದ ಅಪಾಯ ದೂರವಾಯಿತ್ತೆಂಬ ಭರವಸೆಯಿಂದ ನಿರ್ಭೀತನಾಗಿ, ನಿರಾತಂಕವಾಗಿ ತನ್ನ ಮನೆಗೆ ಹೊರಟನು. ಆದರೆ ಕಾಶ್ಮೀರಿ ಗೇಟ್ ಬಳಿಯಲ್ಲಿದ್ದ ಸೆಂಟ್ ಸ್ಟಿಫನ್ಸ್ ಕಾಲೇಜಿನ ಆಟದ ಮೈದಾನದ ಗೋಡೆಯ ಆಚೆಗಿನ ಮೂಲೆಗಳನ್ನು ಸರಿಯಾಗಿ ಪರೀಕ್ಷಿಸಿರಲ್ಲ, ಅಲ್ಲಿ ಅವಿತುಕೊಂಡಿದ್ದ ಹಲ್ಲೆಖೋರರ ಗುಂಪನ್ನು ಗುರುತಿಸುವಲ್ಲಿ ನನ್ನ ತಂದೆ ವಿಫಲರಾಗಿದ್ದರು, ಎಂಬುದು ಬಹಳ ತಡವಾಗಿ ಅವರ ಗಮನಕ್ಕೆ ಬಂದಿತು. ಆ ಕೊಲೆಗಡುಕರಿಂದ ಹಲ್ಲೆಗೊಳಗಾಗಿದ್ದ ಆ ಮನುಷ್ಯ ಹೇಗಾದರೂ ತಪ್ಪಿಸಿಕೊಂಡು ಬದುಕಬೇಕೆಂಬ ಆಸೆಯಿಂದ ಹಿಂತಿರುಗಿ ಓಡುತ್ತ, ಮತ್ತೊಮ್ಮೆ ನಮ್ಮ ಮನೆಯನ್ನು ತಲುಪಲು ಪ್ರಯತ್ನಿಸಿದ್ದನು.
ನನ್ನ ಅಪ್ಪನಿಗೆ ಅವನ ಹೆಸರು ನೆನಪಿರಲಿಲ್ಲ. ನೆನಪಿಡಲು ಸಾಧ್ಯವೂ ಇರಲಿಲ್ಲ ಯಾಕೆಂದರೆ, ಹಾಗೆ ಸತ್ತವರ ಸಂಖ್ಯೆ ಅಗಣಿತವಾಗಿತ್ತು.
ನಾನು ಆ ದಿನವನ್ನು ಎಂದೂ ಕ್ಷಮಿಸಲು ಸಾಧ್ಯವಾಗಿಲ್ಲ. ಯಾವುದೇ ಒಂದು ಜನಸಮೂಹ ತಮ್ಮ ಧಾರ್ಮಿಕ ಉನ್ಮಾದದ ಸ್ಥಿತಿಯಲ್ಲಿ ಅಥವಾ ಯಾವುದೇ ಒಂದು ಪಂಥ, ಪಂಗಡ ತನ್ನ ಶ್ರೇಷ್ಠತೆಯ ಘಮಂಡಿನ ಅಮಲಿನಲ್ಲಿ ತನ್ನ ವಿವೇಕವನ್ನು ಕಳೆದುಕೊಂಡು ಯಾವ ಸಂದರ್ಭದಲ್ಲಾದರು ಹುಚ್ಚುಚ್ಚಾಗಿ ವರ್ತಿಸಬಹುದೆಂಬುದು ಆ ಘಟನೆ ನನಗೆ ಕಲಿಸಿಕೊಟ್ಟಿದೆ. ನಾವು ನಿರ್ಮಿಸಬಯಸಿರುವ, ನಮ್ಮಲ್ಲಿ ಹೆಚ್ಚಿನವರು ಸೃಷ್ಟಿಸಲು ಆಯ್ಕೆ ಮಾಡಿಕೊಂಡಿರುವ ಪ್ರಪಂಚ ಅಷ್ಟು ಸುರಕ್ಷಿತವಾಗಿಲ್ಲವೆಂಬುದು ನನ್ನ ಪ್ರಜ್ಞಾ ಪಾತಳಿಗೆ ತಟ್ಟಿತು. ನಾವು ಹುಟ್ಟಿ ಬೆಳೆಯಲಿರುವ ಈ ಜಗತ್ತು ಅಷ್ಟು ಹೇಳಿಕೊಳ್ಳುವಂಥ ವೀರತನದಿಂದ, ಶೂರತನದಿಂದ ಕೂಡಿಲ್ಲವೆಂಬುದೂ ನನ್ನ ಗಮನಕ್ಕೆ ಬಂದಿತ್ತು. ಮನುಷ್ಯ ಮನುಷ್ಯನ ಜೊತೆ ಜಾತಿ ಜಾತಿಯ ಜೊತೆ, ಧರ್ಮಗಳು ಇತರ ಸಹಿಷ್ಣು ಧರ್ಮಗಳೊಂದಿಗೆ ಮಾಡಿಕೊಳ್ಳಲೇಬೇಕಾದ ಒಪ್ಪಂದ, ಒಡಂಬಡಿಕೆಯನ್ನು ವಿಭಜನೆ ಧ್ವಂಸಗೊಳಿಸಿತು. ಅಂಥ ಒಪ್ಪಂದ ಒಡಂಬಡಿಕೆಗಳಿಲ್ಲದಿದ್ದರೆ, ನಮ್ಮ ಬದುಕು ಸದಾ ಅಸ್ಥಿರವಾಗುತ್ತದೆ. ಯಾವುದೋ ಅನಾಗರಿಕರಿಗೆ ನಾವು ಗುಲಾಮರಾಗಬೇಕಾಗುತ್ತದೆ. ಮಾನವೀಯ ನೆಲೆಗಟ್ಟಿನ ಮೇಲೆ ನಿಂತ ಪರಸ್ಪರ ಸೌಹಾರ್ದದ ಸಂಬಂಧ ಕಳಚಿ ಬಿದ್ದೊಡನೆಯೇ, ನಾವು ಪಾಶವೀ ಶಕ್ತಿಗಳ ಪದತಲದಲ್ಲಿ ಬಿದ್ದು ಒದ್ದಾಡುವುದು ಖಚಿತ, ಎರಡೂ ವಿಭಿನ್ನ ರಾಷ್ಟ್ರಗಳಲ್ಲಿ ಎಲ್ಲ ಸದ್ಭಾವನ, ಸದ್ವಿವೇಕದ ಜನರು ಮಾಡಬಹುದಾಗಿದ್ದ ಅತಿ ಹೆಚ್ಚಿನ ಕೆಲಸವೆಂದರೆ, ಸಹನಾಶೀಲತೆಯನ್ನು ಮೈಗೂಡಿಸಿಕೊಂಡು ಪರಸ್ಪರ ಔದಾರ್ಯ, ದಯಾನುಕೃಪೆಯಿಂದ ಸಂತೈಯಿಸುವದು ಮತ್ತು ಸಮಾಧಾನಿಸುವದು.
ವಷಗಳು ಉರುಳಿದಂತೆ, ಆ ದಿನಗಳ ನನ್ನ ನೆನಪುಗಳು, ಆ ಭೀತಿಯ ಬಗ್ಗೆ, ಆ ಭಯಾನಕ ಘಟನೆಗಳ ಬಗ್ಗೆ ನನ್ನ ಖಾಸಗೀ ಗೀಳುಗಳಾಗಿರಲಿಲ್ಲವೆಂಬುದು ಸ್ಪಷ್ಟವಾಯಿತು. ಯಾಕೆಂದರೆ, ಇತರ ಅನೇಕರಿಗೂ ಆ ಕಾಲದಲ್ಲಿ ಅಂಥ ಆಘಾತಕರ ಅನುಭವಗಳಾಗಿದ್ದವು. ಅಂದಿನಿಂದಲೂ ಅವು ಅವರ ಮಾನಸದಲ್ಲಿ ಮಾಸದೆ ಐಹೀಕ ಅನುಭವದ ಅವಿಭಾಜ್ಯ ಅಂಗವಾಗಿ ಉಳಿದಿದ್ದವು. ಬರುಬರುತ್ತ ವಿಭಿನ್ನ ಜನಾ ಬಾಯಿಂದ ಕೇಳಿದ, ಹಲವಾರು ಕಥನಗಳನ್ನು ಓದಿ ಸಂಗ್ರಹಿಸಿದ ವಿವರಗಳಿಂದಾಗಿ ನನ್ನ ಸ್ಮೃತಿಗಳು ಸಾಂದ್ರವಾಗತೊಡಗಿದವು. ಆಸ್ತಿ ಪಾಸ್ತಿಗಳು ಸುಟ್ಟುಹೋದುದ್ದರ ಬಗ್ಗೆ ನನ್ನ ಸೋದರತ್ತೆಯರು ಹೇಳಿದ್ದು, ನನ್ನ ಆ ಅನುಭವಗಳ ತೀವ್ರತೆಯನ್ನು ಹೆಚ್ಚಿಸಿದವು. ಒಬ್ಬರು ತಾವು ಕಣ್ಣಾರೆ ಕಂಡ ಮಾರಣಹೋಮದ ಬಗ್ಗೆ ಮಾತಾಡಿದರೆ ಇನ್ನೊಬ್ಬರು, ಅಂದು ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಅವರ ಅಂಗಾಂಗಳನ್ನು ಕತ್ತರಿಸಿ ವಿರೂಪಗೊಳಿಸಿದ ಕ್ರೌರ‍್ಯದ ಬಗ್ಗೆ ಹೇಳಿದರು. ಇನ್ನೂ ಕೆಲವರು ಗತದ ಬಗ್ಗೆ ಗೀಳಿನಿಂದ ಹಲುಬಿದರು. ಹಾಗೆ ಮಾತಾಡುವಾಗ, ಅವರ ಕಣ್ಣಗಳು ತುಂಬಿ ಬರುತ್ತಿದ್ದವು. ಅಂಥ ದುರ್ಭರ ಸಂದರ್ಭದಲ್ಲಯೂ ತಮಗೆ ದೊರೆತ ಸಹಾನುಭೂತಿ, ತಮ್ಮ ಜೊತೆಗೆ ಸಭ್ಯತೆಯಿಂದ ನಡೆದುಕೊಂಡವರ ಮಾನವೀಯ ಅನುಕಂಪೆ, ಇನ್ನು ಕೆಲವೊಮ್ಮೆ, ತೋರಿದ ಧೈರ್ಯ ಮೆರೆದ ನಿಸ್ವಾರ್ಥತೆ ಇತ್ಯಾದಿಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಅಂಥ ಸಂದರ್ಭಗಳಲ್ಲಿ ಅವರ ಹೃದಯ ತುಂಬಿಬರುತಿತ್ತು. ಗಂಟಲು ಕಟ್ಟಿಕೊಳ್ಳುತಿತ್ತು. ಜಾತಿ, ಜನಾಂಗ, ಮತ, ಧರ್ಮ ಮುಂತಾದ ಪೂರ್ವಾಗ್ರಹಗಳಿಂದ ಮುಕ್ತವಾದ ಕ್ರಿಯೆಗಳ ಬಗ್ಗೆ ಬಹು ಮುತುವರ್ಜಿಯಿಂದ ಮಾತಾಡುತ್ತಿದ್ದರು. ಅಂಥ ಗುಣವಿಶೇಷಗಳನ್ನು ಸಾಮಾನ್ಯ ಸಾಂಸ್ಕೃತಿಕ ನಡುವಳಿಕೆಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದೇವೆ. ನಮ್ಮ ಶ್ರೇಷ್ಠ ಧೀರೋದಾತ್ತ ಗುಣಗಳನ್ನು ರುಢಿಸಿಕೊಳ್ಳುವಲ್ಲಿ ಸೋತಿದ್ದೇವೆ. ಹೀಗೆ ನಾನು ಕೆಡುಕಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತ, ನಮ್ಮಂಥ ಪ್ರಪಂಚದಲ್ಲಿ ಔದಾರ್ಯದ, ಭೂಮ ಮನೋಭಾವದ ಸಾಧ್ಯತೆಗಳನ್ನು ಬೋಧಿಸುತ್ತಲೇ ಬೆಳದು ದೊಡ್ಡವನಾದೆ.
ಈಗ ಒಂದು ತಲೆಮಾರಿನ ನಂತರ, ನಾನು ವಿಭಜನೆಯ ಬಗ್ಗೆ ಆಲೋಚಿಸಿದಾಗಲೆಲ್ಲ ನನಗೆ ಅನೇಕ ಅನುಮಾನಗಳು ಹಾಗೂ ಪ್ರಶ್ನೆಗಳ ಸರಣಿಯೇ ಎದುರಾಗುತ್ತದೆ. ದುರ್ದೈವವಶಾತ್, ವಿಭಜನೆಯು ನಮ್ಮ ಸಾಮಾಜಿಕ ಹಾಗೂ ರಾಜಕೀಯ ಬದುಕಿನ ನಿರ್ಧಾರಕ ಘಟನೆಯಾಗಿದ್ದರೂ, ಅದು ಇನ್ನೂ ನಮ್ಮ ರಾಷ್ಟ್ರೀಯವಾದಿ ಕಥನದ ಕೇಂದ್ರ ಭಾಗವಾಗಿ ಪರಿಣಮಿಸಬೇಕಾಗಿದೆ. ವಿಭಜನೆಯ ಕುರಿತು ಕೆಲಮಟ್ಟಿಗಾದರೂ ವಸ್ತುನಿಷ್ಠವಾಗಿದ್ದು ನಂಬಲಾರ್ಹವಾಗಿರುವ ಚಾರಿತ್ರಿಕ ದಾಖಲೆಗಳು ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾಗಿವೆ. ಅಂಥ ಚಾರಿತ್ರಿಕ ದಾಖಲೆಗಳೇ ನಮ್ಮ ಚಿಂತನೆಗೆ ನೆಲೆ ಒದಗಿಸಬಹುದಾದ, ಆಧಾರ ಭೂತವಾಗಿ ನಂಬಬಹುದಾದ ವಿವರಣೆಗಳನ್ನು ಕೊಡಬಲ್ಲವು.
ವಿಭಜನೆಯ ಕುರಿತು ಬಂದಿರುವ ಅನೇಕ ಚರಿತ್ರೆಯ ಗ್ರಂಥಗಳು ಒಂದೋ, ಪಾಕಿಸ್ತಾನದ ಸಮರ್ಥಕರಿಂದ ಬರೆಯಲ್ಪಟ್ಟಿವೆ; ಇಲ್ಲವೆ, ಅದರ ಕಡುವಿರೋಧಿಗಳಿಂದ ರಚಿಸಲ್ಪಟ್ಟಿವೆ. ಹೊಸ ಅನುಸಂಧಾನಗಳ ಕಾರಣದಿಂದಾಗಿ ರಚನೆಯಾಗಿರುವ ಬಿಷಿನ್ ಚಂದ್ರ ಮತ್ತು ಆಯೇಷಾ ಜಲಾಲ್, ಸುಧೀರ ಚಂದ್ರ ಹಾಗು ಜ್ಞಾನೆಂದ್ರ ಪಾಂಡೆ ಇವರ ಕೃತಿಗಳು ಮಾತ್ರ ಈ ಮೇಲಿನ ಮಾಲೆಗೆ ಹೊರತಾಗಿವೆ. ಪಾಕಿಸ್ತಾನದ ಸಮರ್ಥಕರು ಬರೆದಿರುವ ಚರಿತ್ರೆಗಳು ಸಾಮಾನ್ಯವಾಗಿ ಹಿಂದೂಗಳ ಸಾರ್ವಭೌಮತ್ವದ ಕುರಿತು ಮುಸ್ಲಿಮ್‌ರಿಗಿದ್ದ ಭಯ; ಆತಂಕಗಳಿಂದಲೇ ಆರಂಭವಾಗುತ್ತಿವೆ. ಅವುಗಳಲ್ಲಿ ಹಿಂದೂಗಳ ಅಸಹಿಷ್ಣುತೆಯ ಬಗ್ಗೆ ಒತ್ತುಕೊಡುವುದಲ್ಲದೆ. ಪದೇ ಪದೆ ಅದರ ಬಗ್ಗೆಯೇ ಮಾತಾಡುವ ಮೂಲಕ ತಮ್ಮ ಅಪಾದನೆಯನ್ನು ಸಾಬೀತುಗೊಳಿಸಲು ಪ್ರಯತ್ನಿಸುತ್ತವೆ. ಇನ್ನೊಂದೆಡೆ, ಮುಸ್ಲಿಮ್‌ರ ಕಟ್ಟಾ ವಿರೋಧಿಗಳು ಬರೆದಿರುವ ಗ್ರಂಥಗಳು ಎಡೆಬಿಡದೆ ಬ್ರಿಟಿಷರೊಂದಿಗೆ ಮುಸ್ಲಿಮ್‌ರು ಕೈಗೂಡಿಸಿ ದೇಶಕ್ಕೆ ವಿಶ್ವಾಸ ದ್ರೋಹ ಬಗೆದರು, ಎಂಬ ಕುರಿತೇ ಹೆಚ್ಚಿಗೆ ಒತ್ತು ಕೊಡುತ್ತವೆ. ಮೊದಲನೇ ತರಹದ ಗ್ರಂಥಗಳು ಒಂದು ನಮೂನಿ ಸ್ತೋತ್ರಗಳಂತೆ ಕಂಡೆರೆ, ಎರಡನೇ ಪ್ರಕಾರದ ಗ್ರಂಥಗಳು ಪ್ರಾಚೀನ ಭೂತ ಶಾಸ್ತ್ರಿಗಳಂತೆ ಕಾಣಿಸುತ್ತವೆ. ತಮ್ಮ ರೂಪು-ರಚನೆಯ ಸರಳತೆಯಿಂದಾಗಿಯೇ, ಈ ಎರಡು ಪ್ರಕಾರದ ಗ್ರಂಥಗಳು ತಾವು ಪ್ರತಿಪಾದಿಸುವ ವಿಷಯಗಳಿಗೆ ವಿಪುಲ ತಥ್ಯಗಳನ್ನು ಒದಗಿಸುವ ಹೊಣೆಯಿಂದ ಜಾರಿಕೊಳ್ಳುತ್ತವೆ. ತಾವು ಮಂಡಿಸುವ ಸಂಗತಿಯನ್ನು ರುಜುವಾತುಗೊಳಿಸುವ ಭಾರಕ್ಕೆ ಹೆಗಲು ಕೊಡುವದಾಗಲಿ ಅಥವಾ ತಮ್ಮ ನಿಲುವನ್ನು ಸಾಬೀತುಗೊಳಿಸಲು ಅವಶ್ಯವಿರುವ ಅಂಶಗಳನ್ನು ಮಂಡಿಸುವ ಗೋಜಿಗೆ ಹೋಗುವ ಪ್ರಮೇಯವಾಗಲಿ ಇಲ್ಲದೆಯಿರುವುದರಿಂದಲೇ ಅವು ತಮ್ಮದೇ ಆದ ರೀತಿಯಲ್ಲಿ ಬಹು ಪರಿಣಾಮಕಾರಿಯಾದ ಕೃತಿಗಳು ಎನಿಸುತ್ತಿವೆ. ಈ ಗ್ರಂಥಗಳು ಉಕ್ಕಿಸುವ ಕರುಣೆ, ಭಾವಾತಿರೇಕಗಳಿಂದ ನನಗೆ ಎಡ್ಮಂಡ್ ಬರ್ಕ್ ಇಂಥ ಪುರಾಣಗಳ ಸೃಷ್ಟಿಕರ್ತರನ್ನು ಕುರಿತು ಹೇಳಿರುವ ಮಾತು ನೆನಪಾಗುತ್ತದೆ - ‘ನನಗಂತು ಒಂದು ಇಡೀ ಜನಾಂಗವನ್ನು ದೂಷಿಸುವ ದಾರಿ ವಿಧಾನಗಳು ಗೊತ್ತಿಲ್ಲ’.
ಚೌಧರಿ ರಹಮತ್ ಅಲಿ ಪ್ರಕಟಿಸಿದ ೧೯೩೦ರ ಕೆಂಬ್ರಿಜ್ ಕರ ಪತ್ರ ಪಾಕಿಸ್ತಾನದ ಬಗ್ಗೆ ಪರಿಕಲ್ಪನೆಯನ್ನು ಸೃಷ್ಟಿಸಿ, ಅದರ ರೂಪು ರೇಷಗಳನ್ನು ಮಂಡಿಸಿತು, ಮುಸ್ಲಿಮ್‌ರು ತಮ್ಮ “ಸಾಮಾಜಿಕ ವಿಮೋಚನೆ”ಗಾಗಿ, “ಆರ್ಥಿಕ ಬಿಡುಗಡೆ”ಗಾಗಿ “ರಾಷ್ಟ್ರೀಯ ಸ್ವಾತಂತ್ರ್ಯ”ಕ್ಕಾಗಿ ಮತ್ತು “ಆಧ್ಯಾತ್ಮಿಕ ಮೊಕ್ಷ”ಕ್ಕಾಗಿ ಹೋರಾಟ ಮಾಡಬೇಕಾಗಿದೆ - ಎಂದು ಘೋಷಿಸಿದ ಅದು “ಭಾರತೀಯತೆ”ಯ “ಅನಾಗರಿಕ ಪ್ರಭಾವ”ಗಳಿಂದ ಸಮಸ್ತ ಮುಸ್ಲಿಮರನ್ನು ವಿಮೋಚನೆಗೊಳಿಸಬೇಕಾಗಿದೆ - ಎಂದು ಕರೆಕೊಟ್ಟಿತ್ತು. ಆದರೆ ಬ್ರಿಟಿಷ್ ಪಾರ್ಲಿಮೆಂಟಿನ ಜಂಟಿ ಸಮಿತಿಯಲ್ಲಿದ್ದ ಮುಸ್ಲಿಮ್ ಲೀಗಿನ ಪ್ರತಿನಿಧಿ ಅದನ್ನು “ಕೇವಲ ಒಬ್ಬ ಹುಡುಗ ಬುದ್ದಿಯ ವಿದ್ಯಾರ್ಥಿಯ ಯೋಚನೆಯೆಂದು... ಕಾರ್ಯಸಾಧುವಲ್ಲದ ಅಸಂಭವ ಭ್ರಾಂತಿಯೆಂದು ತಕ್ಷಣವೇ ತಿರಸ್ಕರಿಸಿದರು. ಆ ಕರಪತ್ರದಲ್ಲಿ ಅವನು ಬಹುಮಟ್ಟಿಗೆ “ಭಾರತೀಯತೆ”ಯಿಂದ ದಬ್ಬಾಳಿಕೆಗೆ ಒಳಗಾಗಿರುವ ಇತರ ಜನಾಂಗಗಳಾದ ದ್ರಾವಿಡರು, ಸಿಕ್ಖ್‌ರು ರಾಜಪೂತರು ಮತ್ತು ಮರಾಠರು ಕೂಡ ತನ್ನ ಈ ವಿಮೋಚನಾ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆಕೊಡುತ್ತಾನೆ. ಪಾಕಿಸ್ತಾನ ಪರ ಆಂದೋಲವನ್ನು ಬೆಂಬಲಿಸುವ ಇತರ ಎಲ್ಲರಂತೆಯೇ ರೇಹಮತ್ ಅಲಿ ಕೂಡ ಭಾರತದ ವಿಭಿನ್ನ ಇಸ್ಲಾಮಿಕ್ ಪಂಥಗಳ ನಡುವಿನ ಭೇದ ವೈರುದ್ಯಗಳನ್ನು ಗೌಣಗೊಳಿಸುತ್ತಾರೆ; ಇಲ್ಲವೇ ಇಲ್ಲವೆಂದು ಭಾವಿಸುತ್ತಾರೆ. ಭಾರತದಲ್ಲಿ ವಿಶಿಷ್ಟ ಪ್ರಾಂತಗಳ ಸದಸ್ಯರಾಗಿರುವ ಅಥವಾ ಒಂದು ನಿದಿಷ್ಟವಾದ ಕುಶಲ ವೃತ್ತಿಯ ಸಂಘದ ಅನುಯಾಯಿಗಳಾಗಿರುವ ಮುಸ್ಲಿಮ್‌ರ ಮಧ್ಯ ಇರುವ ಭಿನ್ನತೆ ಅವರ ಬದುಕಿನ ವೈವಿಧ್ಯತೆ ಇತ್ಯಾದಿಗಳನ್ನು ಅವರು ಗಮನಿಸುವುದೇ ಇಲ್ಲ. ಅಂತೆಯೇ ೧೯೬೮ ರಷ್ಟು ತೀರ ಇತ್ತೀಚಿಗೆ ಬಂದಿರುವ ಕೆ.ಕೆ. ಅಜೀಜ್ ಅವರ ಕೃತಿಯಲ್ಲಿಯೂ ಇಂಥ ಒಮ್ಮಖ ನಿಲುವನ್ನು ಕಾಣಬಹುದು. ಕೆ.ಕೆ. ಅಜೀಜ್ ಅವರು ಪಾಕಿಸ್ತಾನದ ಗೌರವಾನ್ವಿತ ಚರಿತ್ರೆಕಾರರು. ಅವರು ಭಾರತದ ವಿಭಜನೆಗೆ ಕಾರಣೀಭೂತವಾದ ಘಟನೆಗಳ ಕುರಿತು ತಮ್ಮ ನಿಲುವನ್ನು ಪ್ರತಿ ಪಾದಿಸುತ್ತ ಕಾಂಗ್ರೆಸ್ ಪ್ರಣೀತ “ಭಾರತೀಯ ರಾಷ್ಟ್ರೀಯವಾದವು ತನ್ನ ಹುಟ್ಟಿನಿಂದಲೂ ಸತ್ವ್‌ತಃ ಹಿಂದೂ ರಾಷ್ಟ್ರೀಯವಾದವೇ ಆಗಿತ್ತು. ಆದ್ದರಿಂದಲೇ ಮುಸ್ಲಿಮ್‌ರು ಅದನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ, ಎಂದು ಬರೆದಿದ್ದಾರೆ. ಅವರು ತಮ್ಮ ನಿಲುವಿನ ಸಮರ್ಥನೆಗಾಗಿ ೧೯೦೬ ರಲ್ಲಿ ಪ್ರಕಟಿಸಲ್ಪಟ್ಟ ಅಮೀರ್ ಅಲಿಯವರ ಹೇಳಿಕೆಯನ್ನು ತಮ್ಮ ಅನುಮೋದನೆಯೊಂದಿಗೆ ಉದ್ಧರಿಸುತ್ತಾರೆ. ನಿಜವೆಂದರೆ, ಆಗಿನ್ನೂ ರಾಷ್ಟ್ರೀಯ ಅಂದೋಲನ ಪೂರ್ತಿಯಾಗಿ ಕಾಂಗ್ರೇಸ್ಸಿನ ಹಿಡಿತದಲ್ಲಿರಲಿಲ್ಲ. ಆದರೂ ಅವರು ಮುಸ್ಲಿಮ್‌ರಾರೂ ಕಾಂಗ್ರೆಸ್ ಸೇರಬಾರದೆಂದು ಹೇಳಿದರು. ಯಾಕೆಂದರೆ, ‘ಬಹುಸಂಖ್ಯಾಂತರ ಜಗನ್ನಾಥನ ರಥ ಚಕ್ರಕ್ಕೆ ಕಟ್ಟಲ್ಪಡುವ ನಾವು ಅಂತಿಮವಾಗಿ ನಜ್ಜು ಗುಜ್ಜಾಗಿ ನಿರ್ನಾಮವಾಗುವದು ಖಚಿತ; ನಮ್ಮ ರಾಷ್ಟ್ರೀಯತೆಯ ನಾಮಾವಶೇಷವೂ ಉಳಿಯದಂತೆ ನಶಿಸಿ ಹೋಗುವದು ಖಂಡಿತ’. ಈ ಘೋಷಣೆಯಲ್ಲಿ ಹೇಳಿಕೊಳ್ಳುವಂಥ ಚಾರಿತ್ರಿಕ ಸತ್ವ ಇರಲಿಲ್ಲವಾದ್ದರಿಂದ ಅಜೀಜ್ ಅವರು ಅದನ್ನು ಮತ್ತೆ ಮತ್ತೆ ಪುನರಪಿ ಪ್ರಸ್ತಾಪಿಸಿ, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ೧೯೩೧ರಲ್ಲಿ ಎಂಪಾಯರ್‌ರಿವ್ಯೂನಲ್ಲಿ ಪ್ರಕಟವಾದ ಮೌಲಾನಾ ಶೌಕತ್ ಅಲಿಯವರ ಲೇಖನಕ್ಕೆ ಮೊರೆಹೋಗುತ್ತಾರೆ. ಅವರು, ಮುಸ್ಲಿಮ್‌ರು ಬ್ರಿಟಿಷ್‌ರನ್ನೆ ನಂಬಬೇಕು ಎಂದು ಕರೆಕೊಡುತ್ತಾರೆ. ಯಾಕೆಂದರೆ, ಹಿಂದೂಗಳು ಮುಸ್ಲಿಮ್‌ರ ಮೇಲೆ ತಮ್ಮ ಮೇಲ್ಮೆಯನ್ನು ಸಾಧಿಸುತ್ತ ತಮ್ಮ ಅಧಿನಾಯಕತ್ವವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ತಮ್ಮ ಅಧೀನರನ್ನಾಗಿ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ, ಎಂಬುದು ಅವರು ಕೊಟ್ಟ ಕರೆಯ ಧ್ವನಿಯಾಗಿತ್ತು. ಒಂದಿಷ್ಟೂ ಅಳುಕಿಲ್ಲದೆ, ಭಿನ್ನಮತವಿಲ್ಲದೆ ಅಜೀಜ್ ಅವರು ಸ್ವೀಕರಿಸಿದ ಮೌಲಾನಾ ಶೌಕತ್ ಅಲಿಯವರ ವಾಗ್ವಾದ - ತಮ್ಮ ಧರ್ಮಬಾಂಧವರು ಹಿಂದೂಗಳು ಅಧಿನಾಯಕತ್ವದ ಸಂಚಿನ ಬಗ್ಗೆ ಸದಾ ಜಾಗೃತರಾಗಿರಬೇಕು-ಹಾಗೇ ಮುಂದುವರೆದು ತುಸು ವಿಕೃತಗೊಳ್ಳುತ್ತದೆ. ಚಾರಿತ್ರಿಕವಾಗಿ ಮುಸ್ಲಿಮ್‌ರು ಎಂದೂ ಹಿಂದುಗಳಂತಿರಲಿಲ್ಲ; ಅವರು ಆಳರಸರಾಗಿದ್ದರೆ ವಿನಃ ಹಿಂದುಗಳಂತೆ ಯಾವಾಗಲೂ ಆಳಲ್ಪಟ್ಟ ಪ್ರಜೆಗಳಾಗಿರಲಿಲ್ಲ. ಹಾಗಾಗಿ ಮುಸ್ಲಿಮ್‌ರು ಸದಾ ಮುಕ್ತರು, ಎಂಬುದು ಗಮನಾರ್ಹ. ಅವರಿಗೆ ಜೀತ, ಗುಲಾಮಗಿರಿಯೆನ್ನುವುದೇ ಗೊತ್ತಿಲ್ಲ. ಎಂಥ ಕಷ್ಟ ಕಾಲದಲ್ಲೂ ಮುಸಲ್ಮಾನರು ಧೃತಿಗೆಟ್ಟು ಸಂತುಲನೆ ಕಳೆದುಕೊಂಡವರಲ್ಲ. ಅವರಿಗೆ ತಮ್ಮ ಘನತೆ, ಗೌರವಗಳನ್ನು ಕಾಯ್ದುಕೊಳ್ಳವುದು ಹೇಗೆ ಎಂಬುದು ಚೆನ್ನಾಗಿ ಗೊತ್ತು-ಎಂದು ಮುಂತಾಗಿ ಮೌಲಾನಾ ಶೌಕತ್ ಅಲಿಯವರು ಭಾವಾವೇಶದಿಂದ ಬರೆಯುತ್ತಾರೆ. ಮುಸ್ಲಿಮ್‌ರು ಸ್ವಭಾವತಃ ಸಂವಿಧಾನ ಬದ್ಧರು. ಆದ್ದರಿಂದ ಅವರು ಬ್ರಿಟಿಷ್‌ರ ಮೇಲೆ ವಿಶ್ವಾಸವಿಡಬೇಕು. ಯಾಕೆಂದರೆ ಬ್ರಿಟಿಷರು ನ್ಯಾಯಯುತವಾದ ಕಾಯ್ದೆಗಳನ್ನು ರಚಿಸಿ ಮುಸ್ಲಿಮ್‌ರಿಗೆ ಸಮುಚಿತವಾದ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಮೇಲಾಗಿ, ಸತ್ಯಾಗ್ರಹದ ಭಕ್ತರು, ಬೆಂಬಲಿಗರು ಪ್ರಚುರ ಪಡಿಸುತ್ತಿರುವ ಹಿಂದೂಗಳ ಸಂಘರ್ಷಮಯ ರಾಜಕಾರಣ ಸಂವಿಧಾನ ವಿರೋಧಿಯಾಗಿದೆ. ಅಷ್ಟೇ ಅಲ್ಲ, ಅದು ಇಸ್ಲಾಮಿನ ಬೋಧನೆಗೆ ವಿರುದ್ಧವಾಗಿದೆ: ಇಸ್ಲಾಂ ಯಾವಾಗಲೂ ಆಳರಸರಿಗೆ ವಿಧೇಯವಾಗಿರುವದನ್ನು ಪುರಸ್ಕರಿಸುತ್ತದೆ. ನಿಜವಾಗಿಯೂ ಸಾಮಾಜಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಕವಾಗಿ ತಮಗೆ ತೀರ ಹತ್ತಿರದವರಾಗಿರವ ಬ್ರಿಟಿಷ್‌ರೊಂದಿಗೆ ಮುಸ್ಲಿಮ್‌ರು ಆಪ್ತ ಸಂಬಂಧಗಳನ್ನು ಸಂಸ್ಥಾಪಿಸಿಕೊಳ್ಳಲು ಪ್ರಯತ್ನಿಸಬೇಕೆ ವಿನಃ ‘ಮೂರ್ತಿ ಆರಾಧಕರಾಗಿರುವ ಹಿಂದೂಗಳೊಂದಿಗೆ ಅಲ್ಲ’. ಈ ವಾದದ ಅತ್ಯಂತ ವಿಕೃತ ಮತ್ತು ವಿಲಕ್ಷಣ ಭಾಗವೆಂದರೆ, ಬ್ರಿಟಿಷರು ಪ್ರಪಂಚದಲ್ಲಿಯೇ ಅತ್ಯಂತ ಬೃಹತ್ತಾದ ಮುಸ್ಲಿಮ್ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಜೊತೆಗೆ ಸ್ವತಂತ್ರ್ಯ ಮುಸ್ಲಿಮ್ ದೇಶಗಳೊಂದಿಗೆ ಕನಿಷ್ಠವಾದ ತುಂಬಾ ಆಪ್ತವಾದ ಸಂಬಂಧವನ್ನು ಬೆಳೆಸಿದ್ದರು. ಆದ್ದರಿಂದ ಭಾರತೀಯ ಮುಸ್ಲಿಮ್‌ರು ತಮ್ಮ ಶ್ರೇಯೋಭಿವೃದ್ಧಿಗಾಗಿ ಆ ಸಾಮ್ರಾಜ್ಯದ ಭದ್ರ ಪರಿಧಿಯ ಒಳಗೆ ಇರಲು ಬಯಸುತ್ತಾರೆ, ಎಂಬುವದನ್ನು ಸಹಜವಾಗಿಯೇ ನಿರೀಕ್ಷಿಸಬಹುದು” - ಎಂಬಂಥ ವಾದ ಸರಣಿ ಮೌಲಾನಾ ಶೌಕತ್ ಅಲಿಯವರದು. ಇಂಥ ಚಿಂತನೆಯ ಹಿನ್ನೆಲೆಯಲ್ಲಿ ಅಜೀಜ್ ಅವರಂಥ ವ್ಯಕ್ತಿಗಳು ವಿಭಜನೆಯನ್ನು “ಹಿಂದೂಗಳು ಸೃಷ್ಟಿಸಿದ ಗಲಭೆಗಳಿಂದ (ಫಸಾದತ್) ಸ್ವಾತಂತ್ರ್ಯ (ಆಜಾದಿ)” ಎಂದು ಬಗೆಯುವದು, ಭಾವಿಸುವದು. ಆಶ್ಚರ್ಯಕರವಾಗಿ ಕಾಣಿಸುವುದಿಲ್ಲ. ಅವರ ದೃಷ್ಠಿಯಲ್ಲಿ ಪಾಕಿಸ್ತಾನದ ನಿರ್ಮಾಣ ಅವರ ಪೂರ್ವಕಲ್ಪಿತ ನಂಬಿಕೆಗಳ ಸಮರ್ಥನೆಯಾಯಿತು. ಚರಿತ್ರೆ ಸಾಮಾಜಿಕ ಪ್ರಕ್ರಿಯೆಗಳ ಕ್ರಮಬದ್ಧ ವಿವರಣೆಯಾಗುವ ಬದಲು, ಹೇಳಿದ್ದನ್ನೇ ಹೇಳುವ ಪರಿಕ್ರಮವಾಯಿತು!
ಮುಸ್ಲಿಮರೇ ಒಂದು ಪ್ರತ್ಯೇಕ ರಾಷ್ಟ್ರ ಎಂಬ ಪ್ರಜ್ಞೆಯನ್ನು, ಅದನ್ನು ಸಮರ್ಥಿಸುವ ನಿಲುವನ್ನು ಪಾಕಿಸ್ತಾನ ಆಂದೋಲನದ ಪರವಾಗಿರುವ ಚರಿತ್ರಕಾರರು ವಿರೂಪಗೊಳಿಸಿ ದುರ್ಬಳಿಸಿದರೆ, ಹಿಂದೂ ರಾಷ್ಟ್ರದ ಚರಿತ್ರೆಕಾರರು ಭಾರತದ ಗತಕಾಲವನ್ನು ವೈಭವೀಕರಿಸುತ್ತ, ಮುಸ್ಲಿಮರೇ ಅದನ್ನು ಅಪವಿತ್ರಗೊಳಿಸಿದ ವಿಶ್ವಾಸ ದ್ರೋಹಿಗಳೆಂದು ಆಪಾದಿಸಿ ಖಂಡಿಸುತ್ತಾರೆ. ಮಿಗಿಲಾಗಿ, ಭಾರತದ ಉದ್ದಗಲಕ್ಕೂ ಆಸ್ತಿತ್ವದಲ್ಲಿರುವ ಹಿಂದೂ ಬಂಧುತ್ವಕ್ಕೆ ಭಾರತದ ಮೇಲೆ ಪ್ರಥಮ ಮತ್ತು ಪ್ರಧಾನ ಅಧಿಕಾರವಿದೆ; ಹಾಗಾಗಿ ಅದರ ಬಳುವಳಿಗೆ ಅವರೇ ಭಾಜನರು ಎಂದು ಒತ್ತಿ ಹೇಳುತ್ತಾರೆ. ಆದರೆ ಅವರ ಅಖಂಡ ಹಿಂದೂ ಎಂಬು ಕಲ್ಪನೆಯೇ ತಳಬುಡವಿಲ್ಲದ್ದು. ನೈಜ್ಯ ಶ್ರದ್ಧಾಳುಗಳ ಸಮೂಹದಿಂದ ಕೂಡಿದ ಒಂದು ಹೊಸ ವ್ಯವಸ್ಥೆಗೆ ಹಿಂದೂ ಭ್ರಾತೃತ್ವದ ಪರಿಕಲ್ಪನೆಯೇ ಗಟ್ಟಿಯಾದ ನೆಲೆಯಾಗಬಹುದೆಂಬ ಅವರ ಭಾವನೆ ತುಂಬಾ ಗೊಂದಲಮಯವಾಗಿದೆ ಮತ್ತು ಮಿಥ್ಯೆಯಿಂದ ಕೂಡಿದೆ. ಇಸ್ಲಾಮಿಕ್ ರಾಷ್ಟ್ರೀಯತೆ ಎನ್ನುವದು ಎಷ್ಟು ಹುಸಿ ಕಲ್ಪನೆಯಿಂದ ಕೂಡಿದ್ದೋ, ಹಿಂದೂ ಭ್ರಾತೃತ್ವ ಎನ್ನುವದು ಕೂಡ ಅಷ್ಟೇ ಕಾಲ್ಪನಿಕ ಕಂತೆಯಾಗಿದೆ. ಇಂತು ಭರತೇಂದು ಹರಿಶ್ಚಂದ್ರ ಹಿಂದೂ ನಾಗರಿಕತೆಯ ರೂಪ, ಆಕೃತಿಯ ಬಗ್ಗೆ ಉತ್ಕಟವಾದ ಕಾಳಜಿ ಇಟ್ಟುಕೊಂಡಿದ್ದರೂ ಪ್ರಾಯಶಃ ಅವರೊಬ್ಬ ಕೋಮುವಾದಿ ಚಿಂತಕರಾಗಿರಲಿಲ್ಲ. ೧೮೮೪ರಲ್ಲಿ ಅವರು ಮಾಡಿದ ಒಂದು ಉಪನ್ಯಾಸದಲ್ಲಿ “ಹಿಂದೂ” ಪದವನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಆ ನಿರೂಪಣೆಯ ಬೀಸು ತುಂಬಾ ವಿಸ್ತಾರವಾದದ್ದು. ಅವರ ಪ್ರಕಾರ ಹಿಂದೂಸ್ತಾನದಲ್ಲಿ ವಾಸಿಸುವ ಜೈನರು, ಬೌದ್ಧರು, ಸಿಕ್ಖ್‌ರು, ಬ್ರಹ್ಮೋ ಸಮಾಜದವರು ಮತ್ತು ಮುಸ್ಲಿಮರೆಲ್ಲ ಹಿಂದೂಗಳೇ. ಇಂಥ ಧರ್ಮೋತ್ತರ ತತ್ವಕ್ಕೆ ಸತ್ವ ತುಂಬುವ ಉದ್ದೇಶದಿಂದಲೋ ಎಂಬಂತೆ ಭರತೇಂದು ಕುರಾನಿನ ಕೆಲವು ಭಾಗಗಳನ್ನು ಹಿಂದಿಗೆ (೧೮೭೫) ಅನುವಾದಿಸುವುದರ ಜೊತೆಗೆ ಪ್ರವಾದಿ ಮೊಹಮ್ಮದ್ ಹಸನ್ ಮತ್ತು ಹುಸೇನರ ಸಂಕ್ಷಿಪ್ತ ಜೀವನ ಚರಿತ್ರೆಗಳನ್ನು (೧೮೭೫) ಬರೆದರು. ಇನ್ನೂ ಮುಂದುವರೆದು ಅವರು ಕಬೀರ, ತಾನಸೇನ್ ಮತ್ತು ಪೀರ್‌ಜಾದಿ ಬಿಬಿ ಅವರನ್ನು ಸ್ತುತಿಸುವ ದೀರ್ಘ ಕಾವ್ಯವೊಂದನ್ನು ರಚಿಸಿದರು. ಕುತೂಹಲದ ಸಂಗತಿಯೊಂದರೆ, ೧೮೮೪ ರಲ್ಲಿ ಸರ್ ಸೈಯದ್ ಅಹಮ್ಮದ್ ಖಾನ್ ಮಾಡಿದ ಒಂದು ಉಪನ್ಯಾಸದಲ್ಲಿ “ಹಿಂದೂಗಳು” ಎಂಬುವದನ್ನು ಭರತೇಂದು ಅವರಷ್ಟೇ ವಿಶಾಲವಾಗಿ ವರ್ಣಿಸಿದ್ದಾರೆ. ಅವರು ತಮ್ಮ ಹಿಂದೂ ಪದದ ನಿರೂಪಣೆಯಲ್ಲಿ ಮುಸ್ಲಿಮ್‌ರನ್ನೂ ಒಳಗೊಂಡಿದ್ದರು. ಆದರೆ ೧೯೨೪ರ ಸುಮಾರಿಗೆ ಲಾಲಾ ಲಜಪತ್ ರಾಯ್ ಮತ್ತು ಸ್ವಾಮಿ ಶ್ರದ್ಧಾನಂದ ಪಂಥವರು ಹಿಂದೂ ಮತ್ತು ಮುಸ್ಲಿಮರ ನಡುವಿನ ಹಳೆಯ ವೈಶಮ್ಯದ ಬಗ್ಗೆ ಬಹು ಬಿರುಸಾಗಿಯೇ ಮಾತಾಡಹತ್ತಿದ್ದರು ಮತ್ತು ಖಾಯಂ ಶಾಂತಿಗಾಗಿ ಎರಡು ಭಿನ್ನವಾದ ಧಾರ್ಮಿಕ ರಾಷ್ಟ್ರಗಳನ್ನು ರಚಿಸಲು ಒತ್ತಾಯಿಸಿದರು. ಕಾಲಸರಿದಂತೆ “ಹಿಂದೂ” ಎನ್ನುವ ಪದ ತುಂಬಾ ತೀಕ್ಷ್ಣವಾಗತೊಡಗಿತು, ಕಠಿಣವಾಗಲಾರಂಭಿಸಿತು. ಪರಿಣಾಮವಾಗಿ, ಆಧುನಿಕ ಪ್ರಜಾಸತ್ತಾತ್ಮಕ ಬದುಕಿಗೆ ಪರಮೊತ್ಕೃಷ್ಟ ಸಾಕ್ಷಿ ಮತ್ತು ನಿದರ್ಶನವಾಗಬಹುದಾಗಿದ್ದ ಗಾಂಧಿಯನ್ನು ಕೂಡ ಹಿಂದೂ ಪರಿಧಿಯಿಂದ ನಿರ್ಧಯವಾಗಿ ಹೊರ ಹಾಕಲಾಯಿತು. ವಸ್ತುತಃ ಅವರು ಹಿಂದೂಇಜಂ ವೈಭವಕ್ಕೆ ಮಸಿ ಬಳೆದವರು ಎಂದು ದೂಷಿಸಲಾಯಿತು. ಕೋಮು ಬದ್ಧತೆಯ ಚರಿತ್ರೆಕಾರರು “ಹಿಂದೂ” ಪದವನ್ನು ವಿಶಿಷ್ಟವಾಗಿ ನಿರೂಪಿಸಲಾರಂಭಿಸಿದರು. ಅವರ ಪ್ರಕಾರ ಪ್ರಪ್ರಥಮವಾಗಿ ಇಸ್ಲಾಮಿನ ಕಟ್ಟಾ ವೈರಿಯೇ ಹಿಂದೂ. “ನಿರ್ಧಿಷ್ಟವಾದ ಆದರ್ಶ, ಆಚಾರ-ವಿಚಾರಗಳುಳ್ಳವನು ಹಿಂದೂ” ಎಂಬ ಸಂಗತಿಗೆ ದ್ವಿತೀಯ ಸ್ಥಾನ ಕೊಟ್ಟರು. ದೀರ್ಘ ಕಾಲದ ಚರಿತ್ರೆಯುದ್ದಕ್ಕೂ ತಮ್ಮೆಲ್ಲ ಬದುಕಿನ ವೈವಿಧ್ಯಮಯ ಸಂಕೀರ್ಣತೆಯೊಂದಿಗೆ ಸಹಬಾಳ್ವೆ ನಡೆಸಿದವರ ಜೀವನದಲ್ಲಿ ವಿಭಜನೆ ಒಂದು “ಯಃಕಶ್ಚಿತ ಘಟನೆಯ ಗಳಿಗೆ” ಎಂದು ಬಗೆಯುವ ಬದಲು, ಅದನ್ನು ಮುಸ್ಲಿಮರ ಶ್ರದ್ಧಾಹೀನತೆಗೆ, ದೇಶ ದ್ರೋಹಕ್ಕೆ(?) ನಿದರ್ಶನವಾಗಿ ಮಂಡಿಸಿದರು.
ಕೋಮುವಾದಿ ಚರಿತ್ರೆಗಳಿಗೆ ಪ್ರತಿಯಾಗಿ ವಿಭಜನೆಯ ಕುರಿತ ಕಥೆಗಳು, ಸಿದ್ಧಾಂತಗಳಿಗಿಂತಲೂ ಹೆಚ್ಚಾಗಿ ದಾರುಣಮಯ ಸನ್ನಿವೇಶದಲ್ಲಿ ಮಾನವನ ವಾಸ್ತವಿಕ ಅನುಭವಗಳಿಗೇ ಹೆಚ್ಚು ಒತ್ತು ಕೊಡುತ್ತವೆ. ಅವು ಮನುಷ್ಯ ತನ್ನ ಸಂಸ್ಕೃತಿ ಸಭ್ಯತೆಯನ್ನು ಕಳೆದುಕೊಂಡು, ಅನಾಗರಿಕ ವರ್ತನೆಗೆ ಇಳಿದಾಗ ಸಂಭವಿಸಬಹುದಾದ ಪಾಶವೀ ಕೃತ್ಯಗಳ ನೈಜ ಅನುಭವಗಳನ್ನು ಕುರಿತೇ ಹೆಚ್ಚಾಗಿ ವ್ಯವಹರಿಸಿವೆ. ಈ ಎಲ್ಲ ಕಥೆಗಳನ್ನು ಬಂಧಿಸಿಡುವ ಸಾಮಾನ್ಯ ಸೂತ್ರವೊಂದಿದೆ : ಹಿಂದೂ, ಸಿಕ್ಖ್ ಮತ್ತು ಮುಸ್ಲಿಮರ ದೈನಂದಿನ ಬದುಕಿನಲ್ಲಿ ಯಾವಗಲೂ ದ್ವೇಷ ಅಸೂಯೆಗಳೇ ತುಂಬಿ ತುಳುಕುತ್ತಿದ್ದವು - ಎಂಬ ನಂಬುಗೆ ನಿಲುವುಗಳು ಸಂಪೂರ್ಣವಾಗಿ ಅರ್ಥಹೀನ. ಅದು ನಮ್ಮ ಗ್ರಹಿಕೆಗೆ ಅತೀತವಾದದ್ದು, - ಎನ್ನುವುದೇ ಎಲ್ಲ ಕಥೆಗಳಲ್ಲೂ ಸ್ಥಾಯಿಯಾಗಿ ಪ್ರವಹಿಸುವ ರಸ ವಿಶೇಷವಾಗಿದೆ, ಅವುಗಳನ್ನು ಬಂಧಿಸಿಡುವ ಏಕಸೂತ್ರವಾಗಿದೆ. ನಮ್ಮ ಧಾರ್ಮಿಕ ನಂಬುಗೆ, ಸಾಂಸ್ಕೃತಿಕ ಹಿರಿಮೆ-ಗರಿಮೆಯ ಅಭಿಮಾನ, ನಮ್ಮ ಮಾನವೀಯತೆ ಎಲ್ಲವನ್ನೂ ಮರೆತ
ರಸ್ಪರರನ್ನು ನಿರ್ಧಯವಾಗಿ ಹೊಸಕಿ ಹಾಕುವ, ತೊತ್ತಳ ತುಳಿಯುವಂಥ ಹಿಂಸಾ ಪ್ರವೃತ್ತಿ, ವಿವೇಕಹೀನ ವ್ಯಸನ, ವ್ಯಾಮೋಹ, ರಕ್ತ ಪಿಪಾಸುತನ ಒಮ್ಮಲೇ ಉಮ್ಮಳಿಸಿ ಉಕ್ಕಿದಕ್ಕೆ ಕಾರಣ, ವಿವರಣೆಗಳನ್ನು ಕಂಡುಕೊಳ್ಳಲು ಈ ಸಂಪುಟಗಳಲ್ಲಿ ಸಂಗ್ರಹಿತವಾಗಿರುವ ಕಥೆಗಳು ಕಿಂಚಿತ್ತಾದರೂ ಸಹಾಯ ಮಾಡಬಹುದೆಂಬ ಭರವಸೆ ನನಗಿದೆ. ನಾವೊಂದು ಜನಾಂಗವಾಗಿ ಯಾಕೆ ಅದನ್ನು ಪ್ರತಿರೋಧಿಸಲಿಲ್ಲ? ಆ ಹಿಂದೆ ನಾವು ಅನೇಕ ಸಲ ಮಾಡಿದ್ದಂತೆಯೇ ಯಾಕೆ ಗಾಂಧೀಜಿಯನ್ನು ಅನುಸರಿಸಲಿಲ್ಲ? ಗಾಂಧೀಜಿಯೊಂದಿಗೆ ನೌಖಾಲಿ ಪಯಣದಲ್ಲಿ ಪಾಲ್ಗೊಂಡಂತೆ, ಶ್ರೀ ರಾಮ್‌ಪುರದಲ್ಲಿ ಅವರ ಸುತ್ತ ಅಣಿನೆರೆದು ಶಾಂತಿಯನ್ನು ಎತ್ತಿ ಹಿಡಿಯಲು ಪ್ರಮಾಣ ಮಾಡಿದಂತೆ, ಈ ಹಿಂಸೆಯ ವಿರುದ್ದ ನಾವು ಒಗ್ಗೂಡಿ ಯಾಕೆ ಪ್ರತಿಭಟಿಸಲಿಲ್ಲ? ವಿಭಿನ್ನ ಸಮುದಾಯಗಳು ತಮ್ಮ ಕೃತಿ ಆಚಾರ ವಿಚಾರಗಳ ಮೂಲಕ ಹೆಣೆದಿದ್ದ ಸಾಮುದಾಯಿಕ ಬದುಕಿನ ಸಂಕೀರ್ಣ ನೇಯ್ಗೆ ಯಾಕೆ ಹೀಗೆ ಏಕಾಏಕೀ ಬಿಚ್ಚಿಕೊಂಡಿತು? ನಮ್ಮ ನಮ್ಮ ಧರ್ಮಗಳ, ಮತ ನಂಬುಗೆಗಳ ಉದಾತ ಅನುಭವಗಳು ಮಾತ್ರ ನಮ್ಮನ್ನು ಸಾಮಾಜಿಕ ನ್ಯಾಯದೆಡೆಗೆ ನಿರ್ದೇಶಿಸಬಲ್ಲವು ? ಎಂಬ ಆತ್ಮರತಿ ರೋಗಕ್ಕೆ ಯಾಕೆ ತುತ್ತಾದೆವು? ಸ್ವಯಂ ಶ್ರೇಷ್ಠತೆಯ ಭ್ರಮೆಯ ಬಲೆಗೆ ಯಾಕೆ ಬಿದ್ದೆವು? ಸಭ್ಯರೆನಿಸಿಕೊಂಡವರು. ಉದ್ದಿಗ್ನೆತೆಗೆ ಎಂದೂ ಒಳಗಾಗದವರು ಕೂಡ, ಅಪಹರಣಕ್ಕೊಳಗಾದವರಿಂದ ಕೊಲ್ಲಲ್ಪಟ್ಟವರಿಂದ ಅಥವಾ ಮಾರಲ್ಪಟ್ಟವರಿಂದ ನಿರ್ಮಾಣವಾದ ಖಾಲಿ ಸ್ಥಳಗಳ ಬಗ್ಗೆ ತಮ್ಮ ಬದುಕಿನಲ್ಲಿ ಹೇಗೆ ನಡೆದುಕೊಂಡಿದ್ದಾರೆ? ಅವುಗಳ ಕುರಿತು ಹೇಗೆ ಪ್ರತಿಕ್ರಿಯೆಸಿದ್ದಾರೆ. ಹಲವರನ್ನು ಕೊಂದವರು ಅಥವಾ ಅನೇಕರ ಮೇಲೆ ಬಲತ್ಕಾರ ಮಾಡಿದವರು ಈಗ ಹೇಗೆ ಬದುಕುತ್ತಿದ್ದಾರೆ? ಅಪರಾಧಿ ಭಾವದಿಂದ ಮುಲುಕುತ್ತಿದ್ದಾರೆಯೇ? ಪಶ್ಚಾತ್ತಾಪದಿಂದ ಪರಿತಪಿಸುತ್ತಿದ್ದಾರೆಯೇ? ಅಥವಾ ಅಂಥ ಕೃತ್ಯಗಳನ್ನೆಸಗಿದಕ್ಕೆ ಇವತ್ತಿಗೂ ಖುಷಿಯಿಂದ ಬೀಗುತ್ತಿದ್ದಾರೆಯೇ? ಆಗಿನ ಸಿಟ್ಟು ಸೆಡುವು, ದುಃಖ ದುಮ್ಮಾನ ಎಲ್ಲವನ್ನು ಮೆಟ್ಟಿ ಮೀರಿ ನಿಂತು, ಒಂದು ಹೊಸ ನಾಗರಿಕ ವ್ಯವಸ್ಥೆಯನ್ನು ರಚಿಸುವ ದಾರಿಯಲ್ಲಿ ಇತ್ಯಾತ್ಮಕ ಹೆಜ್ಜೆ ಇಡಬೇಕಾಗಿರುವ ನಾವು ಆ ಗತದ ಅನುಭವಗಳನ್ನು ನೆನಪಿಸಿಕೊಳ್ಳುವ ಪರಿಯೆಂತು?


ಕಾಮೆಂಟ್‌ಗಳು