ಪಾತಾಳಕ್ಕೆ ಪಯಣ
ಡಾ. ರಾಜಣ್ಣ ತಗ್ಗಿ
ಇದೊಂದು ಸೈಫೈ ಕಾದಂಬರಿ, ಅಂದರೆ ಸೈಂಟಿಫಿಕ್ ಫಿಕ್ಷನ್ ಎಂದರ್ಥ. ಇಂತಹ ಸೈಂಟಿಫಿಕ್ ಫಿಕ್ಷನ್ ಬರೆಯುವುದು ತುಂಬ ಪ್ರಯಾಸದ ಕೆಲಸ ಎಂದಿದ್ದಾನೆ ಸೈಫೈ ಬರಹಗಾರನಾದ ಐಜಾಕ್ ಅಸಿಮೋವ್. ಮಾಮೂಲು ಕಾದಂಬರಿಗಳಲ್ಲಿ ಕಥಾಕಾಲವು ಸಾಮಾನ್ಯವಾಗಿ ವರ್ತಮಾನಕ್ಕೆ ಸೇರಿರುತ್ತದೆ. ಹಾಗೆಯೇ ಕಥಾಸ್ಥಳವೂ ಕೂಡ ವರ್ತಮಾನಕ್ಕೆ ಸಂಬಂಧಿಸಿದ ಯಾವುದೋ ಪ್ರದೇಶ ಆಗಿರುತ್ತದೆ. ಆದ್ದರಿಂದ ವರ್ತಮಾನ ಪ್ರಪಂಚಕ್ಕೆ ಸಂಬಂಧಿಸಿದ ಮಾನವ ಸಂಬಂಧಗಳನ್ನು ಆಧರಿಸಿ ಕಥೆ ಹೆಣೆಯುವ ಪ್ರಕ್ರಿಯೆ ಅಷ್ಟೇನೂ ಕಷ್ಟವಲ್ಲ. ಆದರೆ ಸೈಫೈ ಕಾದಂಬರಿಗಳಲ್ಲಿ ಕಥಾಕಾಲ ವರ್ತಮಾನವಲ್ಲ. ಹಾಗಾಗಿ ಕಥಾಕಾಲವು ಯಾವುದೋ ಸದೂರವಾದ ಭವಿಷ್ಯತ್ತಿನಲ್ಲಿರುತ್ತದೆ. ಕಥಾಸ್ಥಳ ಕೂಡ ವರ್ತಮಾನದಲ್ಲಿ ಮಾನವನ ನಿತ್ಯ ವ್ಯವಹಾರಗಳಿಗೆ ವೇದಿಕೆಯಾದ ಈ ಭೂಮಿಯಾಗಿರುವುದಿಲ್ಲ... ಈ ಭೂಮಿಯ ಮೇಲ್ಮೈಗೆ ದೂರವಾಗಿ ಯಾವುದೋ ಗ್ರಹದ ಮೇಲೋ, ಉಪಗ್ರಹದ ಮೇಲೋ, ಭೂಮಿಯ ಒಳಗೋ, ಸಮುದ್ರದ ಆಳದಲ್ಲೋ, ಅಂತರಿಕ್ಷದ ಅಂಧಕಾರದಲ್ಲೋ ಇರುತ್ತದೆ. ಮನುಷ್ಯ ವಾಸವೇ ದುರ್ಲಭವಾಗಿರುವ ಅಂತಹ ಕಡೆಗಳಲ್ಲಿ ಮನುಷ್ಯರು ಹೇಗೆ ಬದುಕುತ್ತಾರೋ, ಅಲ್ಲಿನ ಭೌತಿಕ ಪರಿಸ್ಥಿತಿಗಳು ಹೇಗಿರುತ್ತವೋ ಊಹಿಸಿ ನಿಖರವಾಗಿ ಮತ್ತು ರಮ್ಯವಾಗಿ ಬರೆಯುವುದು ತುಂಬ ಸವಾಲಿನ ಕೆಲಸ...
ಅಂತಹ ಅಸಾಮಾನ್ಯವಾದ ಜೀವನ ಪರಿಸ್ಥಿತಿಗಳಲ್ಲಿ ಏರ್ಪಡಬಹುದಾದ ಮಾನವ ಸಂಬಂಧಗಳ ಘರ್ಷಣೆ ಮತ್ತು ಸವಾಲುಗಳ ಬಗ್ಗೆ ಊಹಿಸಿ ರಂಜನೀಯವಾಗಿ ಕಥೆ ಹೆಣೆಯಬೇಕು. ಹಾಗಾಗಿ ಸೈಫೈ ಬರಹಗಾರನಿಗೆ ಇರಬೇಕಾದ ಅತಿ ಮುಖ್ಯವಾದ ಲಕ್ಷಣವೆಂದರೆ ಅಪಾರವಾದ ಊಹಾಶಕ್ತಿ. ಸೈಫೈ ಲೇಖಕ ತನ್ನ ಊಹಾಶಕ್ತಿಯಿಂದ ಎಷ್ಟೇ ಕಲ್ಪಿತ ಸಾಹಿತ್ಯ ಬರೆದರೂ ಅದನ್ನು ನಮಗೆ ಗೊತ್ತಿರುವ ವಿಜ್ಞಾನಕ್ಕೆ ತುಲನೆ ಮಾಡಿದರೆ ಸರಿಯೆನಿಸಬೇಕು. ಸೈಫೈ ಲೇಖಕನು ವೈಜ್ಞಾನಿಕ ಪ್ರಪಂಚದ ಸರಹದ್ದುಗಳ ಅನಿಶ್ಚಿತ ಅಂಶಗಳನ್ನು ವಿವರಿಸುವ ಸಂದರ್ಭಗಳಲ್ಲಿ ಸ್ವಲ್ಪ ಸ್ವಾತಂತ್ರ್ಯವಹಿಸಿ ಬುದ್ಧಿವಂತಿಕೆ ಯಿಂದ ಅದ್ಭುತವಾದ ಒಂದು ಊಹಾಲೋಕವನ್ನು ಪ್ರದರ್ಶಿಸಿದರೆ ಅಂತಹ ಸೈಫೈ ಕಾದಂಬರಿ ಓದುಗರನ್ನು ಸಮ್ಮೋಹನಗೊಳಿಸುತ್ತದೆ. ಓದುಗರ ಮೇಧಸ್ಸಿಗೆ ಸವಾಲು ಒಡ್ಡುತ್ತದೆ. ಅಂತಹ ಕೃತಿ ಬರೆಯುವ ಲೇಖಕನಿಗೆ ಸೈನ್ಸ್ ತುಂಬ ಚೆನ್ನಾಗಿ ಗೊತ್ತಿರಬೇಕು. ತಮಗೆ ಗೊತ್ತಿರುವ ವೈಜ್ಞಾನಿಕ ವಿವರಗಳನ್ನು ಭವಿಷ್ಯತ್ತಿನ ಮತ್ತೊಂದು ಪೀಳಿಗೆಯು ಹೊಸ ರೀತಿಯಲ್ಲಿ ವಿನಿಯೋಗಿಸುತ್ತಾ ಹೇಗೆ ಅಭಿವೃದ್ಧಿ ಹೊಂದುತ್ತದೋ, ಇಲ್ಲವೆ ಮಾರಕವಾಗಿ ಬಳಸಿಕೊಂಡು ಹೇಗೆ ನಾಶವಾಗುತ್ತದೋ... ಎಲ್ಲವನ್ನೂ ಲೇಖಕನಾದವನು ಕಣ್ಣಮುಂದಿನ ಚಿತ್ರದಂತೆ ಚಿತ್ರಿಸಿ ತೋರಿಸಬೇಕು.
ಒಂದು ಕ್ಷೇತ್ರದಲ್ಲಿ ಸಿಗುವ ಎಲ್ಲ ವೈಜ್ಞಾನಿಕ ವಿಚಾರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಅದನ್ನು ಆಧರಿಸಿ ಅದ್ಭುತವಾದ ಸಾಹಸಗಾಥೆಗಳನ್ನು ಹೆಣೆಯುವುದರಲ್ಲಿ ಹೆಚ್ಚೂಕಡಿಮೆ ಪ್ರಪ್ರಥಮನೆಂದು ಹೇಳಬಹುದಾದ ಹೆಸರು ಜೂಲ್ಸ್ ವರ್ನ್. ಈತ ಮಹಾ ಮೇಧಾವಿ ಕೂಡ... ಸಮುದ್ರ ಪ್ರಯಾಣದ ಸಾಹಸಗಾಥೆಗಳನ್ನು ತುಂಬ ಓದಿಕೊಂಡವ... ಹಾಗಾಗಿ ಈತನ ಮನಸ್ಸಿನಲ್ಲಿ ಚಿಕ್ಕಂದಿನಲ್ಲೇ ಅಂತಹ ಜೀವನದ ಬಗ್ಗೆ ಅಗಾಧವಾದ ತಿಳುವಳಿಕೆ ಬಂದಿತ್ತು.
ಈತನಿಗೆ ಭೌಗೋಳಿಕಶಾಸ್ತ್ರ ಎಂದರೆ ಇನ್ನಿಲ್ಲದ ಅಭಿಮಾನ. ಯುವಕನಾಗಿದ್ದಾ ಗಿನಿಂದಲೂ ಖನಿಜಶಾಸ್ತ್ರದ ಬಗೆಗಿನ ಎಲ್ಲ ಸಾಹಿತ್ಯವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದ. ತನ್ನ ಅಧ್ಯಯನದ ಫಲವೆಂಬಂತೆ ಸೃಜನಶೀಲ ಸಾಹಸ ಕಥೆಯಂತೆ ಹೆಣೆದು ರಮ್ಯ ಬರಹವಾಗಿ ಓದುಗರ ಮುಂದಿಟ್ಟು ತನ್ನ ಮನಸ್ಸಿನಲ್ಲಿದ್ದ ತಹತಹವನ್ನು ಇದರಲ್ಲಿ ಸಾಕಾರಗೊಳಿಸಿದ್ದಾನೆ....
ಆವತ್ತಿನ ಸಾಹಿತ್ಯ ಪ್ರಪಂಚದಲ್ಲಿ ಅಸಾಮಾನ್ಯವಾದ ಮತ್ತು ಸಾಹಸದಿಂದ ಕೂಡಿದ ಪ್ರಯಾಣಗಳು ಯಾಕೆ ಅಷ್ಟು ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದ್ದವೆಂದರೆ, ಅನ್ವೇಷಣಾ ಯಾತ್ರೆ ಮತ್ತು ಸಾಹಸ ಯಾತ್ರೆಗಳನ್ನು ಶ್ರೇಷ್ಠ ವೈಜ್ಞಾನಿಕ ಪ್ರಯತ್ನಗಳಂತೆ ಪರಿಗಣಿಸುತ್ತಿದ್ದ ಕಾಲ ಅದು... ಹಾಗಾಗಿಯೇ ಜೂಲ್ಸ್ ವರ್ನ್ ಅಂತಹ ಅನ್ವೇಷಣಾ ಪ್ರಯತ್ನಕ್ಕೆ ಕೈ ಹಾಕಿದ್ದು... ಆದರೆ ಅದುವರೆಗಿನ ಅನ್ವೇಷಣಾ ಯಾನಗಳೆಲ್ಲವೂ ಭೂಮಿಯ ಮೇಲ್ಮೈಗೆ ಮಾತ್ರವೇ ಪರಿಮಿತವಾಗಿದ್ದವು... ಹಾಗಾಗಿ ಸುರಂಗದ ಮೂಲಕ ಭೂಮಿಯೊಳಕ್ಕೆ ನುಗ್ಗಿ ಹೋಗಿ, ಭೂಗರ್ಭದಾಳದಲ್ಲಿ ಶೋಧಿಸಿದರೆ ಹೇಗಿರುತ್ತದೆ ? ಎಂಬ ಅದ್ಭುತವಾದ ಪ್ರಶ್ನೆಗೆ ಉತ್ತರವಾಗಿ ಹುಟ್ಟಿದ ರೋಮಾಂಚನ ಕಾವ್ಯವೇ ಈ ಪಾತಾಳಕ್ಕೆ ಪಯಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ