ಕರುಳ ತೆಪ್ಪದ ಮೇಲೆ

ಕರುಳ ತೆಪ್ಪದ ಮೇಲೆ
ಚಿದಾನಂದ ಸಾಲಿ
ಭಾರತದ ವಿಭಜನೆ ತಂದೊಡ್ಡಿದ ಹಿಂಸೆ, ಅತ್ಯಾಚಾರ, ಸಾವುಗಳ ಸರಣಿ ಈ ಕೃತಿಯ ಪ್ರಧಾನ ಆಶಯ. ಎರಡೂ ಕಡೆಯ ಲಕ್ಷಾಂತರ ಮಂದಿ ಅಮಾಯಕರು, ಮಹಿಳೆಯರು, ಮಕ್ಕಳು, ಮುದುಕರು ಇದರಲ್ಲಿ ಸುಟ್ಟು ಬೂದಿಯಾದರು. ಭಾರತ ಮತ್ತು ಪಾಕಿಸ್ತಾನದಲ್ಲಿಯ ಅವಿವೇಕಿ ಹಿಂಸಾವಾದಿಗಳು ತಮ್ಮ ಸೇಡಿಗೆ ಹಿಂದೂ, ಮುಸ್ಲಿಂ ಮತ್ತು ಸಿಖ್ಖರನ್ನು ಅತ್ಯಾಚಾರವೆಸಗಿ, ಕೊಚ್ಚಿ ಕೊಲ್ಲಿ, ಹೆಣಗಳನ್ನು ಟ್ರೇನಿನಲ್ಲಿ ಸಾಗಿಸುವ ಅಮಾನುಷ ಕ್ರೌರ್ಯಕ್ಕೆ ವಿರುದ್ಧವಾದ ಶಾಂತಿಯ ಸಂಕೇತ ಪಂಜಾಬ ರಾಜ್ಯದ ಮತ್ತು ಭಾರತದ ಕಡೇ ಹಳ್ಳಿ- ಮನೋಮಜ್ರಾ. ಇಲ್ಲಿಯ ಸಿಖ್ಖರು, ಮುಸ್ಲಿಮರು ಅನ್ಯೋನ್ಯವಾಗಿಯೇ ಬಾಳುತ್ತಿದ್ದರು. ಇಲ್ಲಿ ಜಗ್ಗ-ನೂರನ್‌ರಂಥ ಪ್ರೇಮಿಗಳೂ ಇದ್ದರು. ಜಗ್ಗ ಅಥವಾ ಜಗತ್‌ಸಿಂಗ್ ಭಾರೀ ಆಳು. ಅವನ ಮತ್ತು ನೂರನ್‌ಳ ದೃಶ್ಯ ಅತ್ಯಂತ ರಮ್ಯವಾಗಿದ್ದು ಮನದಲ್ಲುಳಿಯುತ್ತದೆ. ಆದರೆ ನೂರನ್‌ಳ ಪಾತ್ರದ ಪೋಷಣೆ ಇನ್ನಷ್ಟು ಬೆಳೆಯಬೇಕಿತ್ತು. ಮನೋಮಜ್ರಾದ ಮಸೀದಿಯ ಮುಲ್ಲಾನ ಮಗಳು ನೂರನ್, ಸಿಖ್ಖ್ ಜಗ್ಗನ ಜೊತೆ ನಿರ್ಮಲ ಪ್ರೇಮಸಂಬಂಧ ಹೊಂದಿರುತ್ತಾಳೆ. ಕಾದಂಬರಿಯಲ್ಲಿ ಇವೆರಡು ಪಾತ್ರಗಳು ಅವೆಷ್ಟು ವಿಸ್ತೃತಗೊಂಡು ಬೆಳೆದಿವೆಯೋ ನಾ ಕಾಣೆ. ಆದರೆ ಲೇಖಕರು ಪೂರಕವಾಗಿ ಬೆಳೆಸುವ ಸಾಧ್ಯತೆಗಳಿದ್ದವು. ನೂರನ್ ಮುಂದೆ ಪಾಕಿಸ್ತಾನಕ್ಕೆ ಹೋಗುವ ಸ್ಥಿತಿ ಒದಗಿದಾಗ ಜಗ್ಗನ ತಾಯಿಯನ್ನು ಕಾಣುವಲ್ಲಿ ರಂಗಕ್ಕೆ ಬರುವಳು.
ಈ ಕೃತಿಯಲ್ಲಿ ಬರುವ ಇಕ್ಬಾಲ್, ಮೀತ್‌ಸಿಂಗ್, ಜಗ್ಗ, ನೂರನ್, ಡೀಸಿ, ಪಿಎಸ್‌ಐ, ಬಂಟಾಸಿಂಗ್, ಇಮಾಮ್‌ಚಾಚಾ, ಅಮ್ಮ, ಪೋಲಿಸ್ ಪೇದೆಗಳ ಪಾತ್ರಗಳು ನಾಟಕದುದ್ದಕ್ಕೂ ಹರಿದು ಬರುತ್ತವೆ. ಎಲ್ಲ ಪಾತ್ರಗಳೂ ಆಯಾ ದೃಶ್ಯಕ್ಕನುಗುಣವಾಗಿ ಮುಖ್ಯವೇ. ಡೀಸಿ ಮತ್ತು ಪೋಲಿಸ್ ಪಾತ್ರಗಳ ದೃಶ್ಯಗಳನ್ನು ಕಂಡಾಗ ಮಾತ್ರ ಸಮಕಾಲೀನ ಭಾರತದ ಬ್ಯೂರೋಕ್ರಸಿಯ ವ್ಯವಸ್ಥೆಯ ಒಳಸೂಕ್ಷ್ಮಗಳು ಅರಿವಿಗೆ ಬರುತ್ತವೆ. ಈಗಲೂ ನಮ್ಮಲ್ಲಿ ‘ಬ್ರಿಟಿಷ್ ರಾಜ್ಯವೇ ಚೆನ್ನಾಗಿತ್ತು ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಆದರೆ ಸ್ವತಂತ್ರ ಸಿಕ್ಕ ತರುವಾಯನೇ ಡೀಸಿ ಮತ್ತು ಪೋಲಿಸರ ಸಂವಾದಗಳಲ್ಲಿ ಅಧಿಕಾರಶಾಹಿಯ ಲೋಲುಪತೆ, ಹೆಣ್ಣನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಐಷಾರಾಮಿತನದ ಪ್ರಸಂಗಗಳು ತೆರೆದುಕೊಂಡು ಮೇಲಿನ ಮಾತನ್ನು ಹೆಚ್ಚು ಪುಷ್ಟೀಕರಿಸುತ್ತವೆ. ಈ ನಾಟಕದ ಪಾತ್ರವೊಂದು ಇದೇ ಚಿಂತನೆಯನ್ನು ಅಭಿವ್ಯಕ್ತಿಸುತ್ತದೆ. ಇಕ್ಬಾಲ್ ಹೇಳುವ ಮಾತುಗಳಲ್ಲಿ ಇದು ಸ್ಪಷ್ಟಗೊಳ್ಳುತ್ತದೆ. ಪೋಲಿಸರು ಇಕ್ಬಾಲ್‌ನನ್ನು ಬಂಧಿಸಿದಾಗ ಅವನು ಮೀತ್‌ಸಿಂಗ್‌ಗೆ- ‘ಭಾಯೀಜಿ ನನ್ನ ಸಾಮಾನುಗಳನ್ನೆಲ್ಲ ಈ ಚೀಲದಲ್ಲಿ ಹಾಕಿದ್ದೀನಿ. ಇದನ್ನೊಂಚೂರು ನೋಡ್ಕೊಳ್ಳಿ. ಈ ಸ್ವತಂತ್ರ ಭಾರತದಲ್ಲಿ ನಾನು ಪೋಲಿಸರಿಗಿಂತ ಹೆಚ್ಚು ನಿಮ್ಮನ್ನೇ ನಂಬಿದ್ದೀನಿ ಎನ್ನುತ್ತಾನೆ. ಆಡಳಿತ ವ್ಯವಸ್ಥೆ ತನಗೆ ಬೇಕಾದಂತೆ ಕಾನೂನು ತಿರುಚಿ ಬೇಕಾದವರನ್ನು ಬಂಧಿಸಿ ಸೆರೆಮನೆಗೆ ದೂಡಬಹುದು ಎಂಬುದಕ್ಕೆ ಉದಾಹರಣೆಯಾಗಿರುವ ಇಂಥ ದೃಶ್ಯಗಳು ನಾಟಕದಲ್ಲಿ ಸಾಕಷ್ಟಿವೆ.

ಕಾಮೆಂಟ್‌ಗಳು