ಹಿಮ


ಟರ್ಕಿಷ್ ಕಾದಂಬರಿಕಾರ ಒರ್ಹಾನ್ ಪಾಮುಕ್‌ರವರ ರಾಜಕೀಯ ಕಾದಂಬರಿ ‘ಹಿಮ’ ೨೦೦೨ ರಲ್ಲಿ ಪ್ರಕಟಗೊಂಡಿದೆ.  ಟರ್ಕಿ ದೇಶದ ಈಶಾನ್ಯ ದಿಕ್ಕಿನಲ್ಲಿರುವ ‘ಕಾರ‍್ಸ್’ ಎಂಬ ಸಣ್ಣ ನಗರವೊಂದರಲ್ಲಿ ನಡೆಯುವ ಘಟನಾವಳಿಗಳ ಸುತ್ತ ಹೆಣೆದ ಈ ಕಥಾನಕದಲ್ಲಿ ಪಾಮುಕ್ ಪ್ರಯೋಗಾತ್ಮಕವಾಗಿ ಒಂದು ವಿನೂತನ ಬಗೆಯ ರಾಜಕೀಯ ಕಾದಂಬರಿಯನ್ನು ಸೃಷ್ಟಿಸಿದ್ದಾರೆ. ಸಮಕಾಲೀನ ರಾಜಕೀಯ ಸ್ಥಿತ್ಯಂತರಗಳ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವೆನ್ನಿಸುವ ಕಥೆಯ ಹಂದರವನ್ನು ಹೊಂದಿದ ಈ ಕಾದಂಬರಿ ನಮ್ಮ ಕಾಲಘಟ್ಟದ ಅತ್ಯಂತ ಮಹತ್ವಪೂರ್ಣ ಕಾದಂಬರಿ.  ಹೊರಪ್ರಪಂಚಕ್ಕೆ ಟರ್ಕಿ ದೇಶದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಅನಾವರಣಗೊಳಿಸುವ ಕೆಲಸವನ್ನು ಪಾಮುಕ್ ಅದ್ಭುತವಾಗಿ ಮಾಡುತ್ತಾರೆ. ಇಸ್ತಾನ್‌ಬುಲ್‌ನಲ್ಲಿ ವಾಸವಾಗಿರುವ ಪಾಮುಕ್ ಪ್ರಜಾಸತ್ತಾತ್ಮಕತೆಯ ಆಮ್ಲಜನಕವನ್ನು ಟರ್ಕಿಯೊಳಗೆ ಬರಮಾಡಿಕೊಂಡು, ಟರ್ಕಿಷ್ ಜನತೆಯ ದಾರುಣ ಯಾತನಾಮಯ ಅನುಭವಗಳನ್ನು ಹೊರಪ್ರಪಂಚಕ್ಕೆ ರವಾನಿಸುವ ಕೆಲಸವನ್ನು ಎಷ್ಟು ಸಮರ್ಪಕವಾಗಿ ಮಾಡುತ್ತಾರೆಂದರೆ ತಮ್ಮ ಸಂವೇದನೆಗಳಿಗೆ ವ್ಯತಿರಿಕ್ತವಾಗಿ ಅವರೊಬ್ಬ ರಾಜಕೀಯ ಸಿದ್ಧಾಂತಿಯಾಗಿಯೂ ಹೊರಹೊಮ್ಮುತ್ತಾರೆ. “ನನ್ನ ಕಾದಂಬರಿ ಹಿಮ ನಾನು ಉದ್ದೇಶಪೂರ್ವಕವಾಗಿಯೇ ಬರೆದ ಮೊದಲ ಹಾಗೂ ಕೊನೆಯ ರಾಜಕೀಯ ಕಾದಂಬರಿ. ನನ್ನ ರಾಜಕೀಯ ನಿಲುವುಗಳನ್ನು ನಾನು ಪ್ರಕಟಿಸುತ್ತಲೇ ಬಂದಿದ್ದೇನೆ. ಒಂದು ಹಂತದಲ್ಲಿ ನನಗೆ ನಾನೇಕೆ ನನ್ನೆಲ್ಲ ರಾಜಕೀಯ ಚಿಂತನೆಗಳನ್ನು ಒಂದು ಕಾದಂಬರಿಯೊಳಗೆ ಸೇರಿಸಿ ನಿರಾಳವಾಗಿಬಿಡಬಾರದು? ಎನ್ನಿಸಿತು. ನನ್ನ ಬೇರೆ ಕಾದಂಬರಿಗಳು ಇಸ್ತಾನ್‌ಬುಲ್ ನಗರದಲ್ಲಿ ರೂಪುಗೊಂಡಿವೆ. ಆದರೆ, ಈ ಕಾದಂಬರಿಯ ಘಟನೆಗಳು ದೂರದ ಕಾರ‍್ಸ್‌ನಲ್ಲಿ ನಡೆಯುತ್ತವೆ. ನಾನು ಇಪ್ಪತ್ತರ ಹರೆಯದ ಪ್ರಾಯದಲ್ಲಿ ಒಬ್ಬ ಮಿತ್ರನೊಟ್ಟಿಗೆ ಟರ್ಕಿಯ ಉದ್ದಗಲಕ್ಕೂ ಸಂಚರಿಸಿದ್ದೆ. ಆಗ ಕಾರ‍್ಸ್ ನಗರಕ್ಕೂ ಹೋಗಿದ್ದೆ. ಅದರ ಅಗಾಧತೆ ಹಾಗೂ ಸೌಂದರ‍್ಯ ನನ್ನನ್ನು ಆಕರ್ಷಿಸಿತ್ತು. ಭಾಗಶಃ ರಷ್ಯನ್ನರಿಂದ ನಿರ್ಮಿಸಲ್ಪಟ್ಟಿದ್ದ ಈ ನಗರದಲ್ಲಿ ಅಪರಿಚಿತವಾದದ್ದೇನೋ ಇತ್ತು. ಅದು ಟರ್ಕಿಯ ಬೇರೆ ಭಾಗಗಳಿಗಿಂತ ಭಿನ್ನವಾಗಿತ್ತು. ನಾನು ‘ಹಿಮ’ ಕಾದಂಬರಿಯನ್ನು ಬರೆಯಲಾರಂಭಿಸಿದಾಗ ನನಗೆ ಈ ಕಾದಂಬರಿಯ ಘಟನೆಗಳು ನಡೆಯುವುದು ಕಾರ‍್ಸ್ ನಗರದಲ್ಲಿಯೇ ಎಂದೆನ್ನಿಸಿಬಿಟ್ಟಿತು” ಎಂದು ಪಾಮುಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕಾಮೆಂಟ್‌ಗಳು