ದಿ ಪಿಕ್ಚರ್ ಆಫ್ ಡೋರಿಯನ್ ಗ್ರೇ

ಸೌಂದರ್ಯ ಮೀಮಾಂಸೆ ಕುರಿತ ಅವನ ವಿಚಾರಗಳು ಚಿಂತನೆಗಳು ಹೊಸ ಪೀಳಿಗೆಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿತು. ವೈಲ್ಡ್ ಬರೀ ಮಾತುಗಾರ, ಭಾಷಣಕಾರ, ಚಾಟೋಕ್ತಿಕಾರನಷ್ಟೇ ಆಗಿರಲಿಲ್ಲ. ಅತ್ಯಂತ ಮಹತ್ವದ ಬೌದ್ಧಿಕ ಸಂವಾದಕಾರನೂ ಆಗಿದ್ದ. ಆದರೆ ಅವನ ಈ ಸಾಮರ್ಥ್ಯಗಳು ಏಕಕಾಲದಲ್ಲಿ ಅವನಿಗೆ ಮಿತ್ರರನ್ನೂ ಶತ್ರುಗಳನ್ನೂ ಹುಟ್ಟುಹಾಕಿದವು.
ಅವನ ಬಗ್ಗೆ ಜನರಲ್ಲಿ, ಇಡೀ ದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ಉತ್ಸಾಹ, ಮೆಚ್ಚುಗೆಗಳಿಗೆ ೧೮೯೫ರಲ್ಲಿ ಗ್ರಹಣ ಹಿಡಿಯಿತು. ಕ್ವೀನ್ಸ್‌ಬರಿಯ ಶ್ರೀಮಂತನೊಬ್ಬನ ವಿಚಾರದಲ್ಲಿ ಅವಮಾನಕರವಾದ ಲೇಖನ ಬರೆದ ಕಾರಣ ಮಾನನಷ್ಟ ಮೊಕದ್ದಮೆಯನ್ನು ಎದುರಿಸಬೇಕಾಯಿತು. ವಿಚಾರಣೆಯೂ ನಡೆಯಿತು. ಅವನಿಂದ ಘೋರ ಅಪರಾಧ ನಡೆದಿರಲಿಲ್ಲವಾದರೂ ಸಾಮಾಜಿಕ ಸೇಡಿನ ಪರಿಣಾಮವಾಗಿ ಜೈಲು ಶಿಕ್ಷೆಯಾಯಿತು. ದೇಶಾದ್ಯಂತ ಹುಯಿಲೆದ್ದಿತು ಸುಳ್ಳು ಸಾಕ್ಷ್ಯಗಳನ್ನು ಸತ್ಯವೆಂದು ಸಾಬೀತುಪಡಿಸಲಾಯಿತು. ಎರಡು ವರ್ಷ ಜೈಲು ಶಿಕ್ಷೆಯನ್ನು ಘೋಷಿಸಲಾಯಿತು. ವೈಲ್ಡ್‌ನ ಶತ್ರುಗಳ ಪಾಳಯದಲ್ಲಿ, ಸಂಭ್ರಮದ ಪಾನಕೂಟ ಏರ್ಪಾಟಾಯಿತು. ಪರಸ್ಪರ ಚಿಯರ್ಸ್ ಹೇಳಿಕೊಂಡರು. ಕೆಳಗೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ, ಅವನ ಪರವಾಗಿ ಇದ್ದವರೂ ಕೂಡಾ ಅನುಮಾನಿಸತೊಡಗಿದರು. ಕೊಂಡಾಡಿದ್ದನ್ನು ಮರೆತು ಮನಸಿಗೆ ಬಂದಂತೆ ಜನ ಮಾತಾಡಿಕೊಳ್ಳತೊಡಗಿದರು. ಪತ್ರಿಕೆಗಳಲ್ಲಿ ಟೀಕೆ, ಟಿಪ್ಪಣಿ, ವ್ಯಂಗ್ಯ, ಪರಿಹಾಸದ ಬರಹಗಳು ಪ್ರಕಟವಾಗತೊಡಗಿದವು. ಇದೂ ಸಾಕಾಗಲಿಲ್ಲವೆಂಬಂತೆ, ಅವನ ಕೃತಿಗಳನ್ನು ಬಹಿಷ್ಕರಿಸಿದರು. ವರಿಷ್ಠರು, ಶ್ರೀಮಂತರು ಕಳುಹಿಸುತ್ತಿದ್ದ ಸಭೆ, ಸಮಾರಂಭ, ಸಂತೋಷ ಕೂಟಗಳ ಆಹ್ವಾನ ಪತ್ರಿಕೆಗಳು ಬರುವುದು ನಿಂತುಹೋಯಿತು. ಅವನ ನಾಟಕ ಪ್ರತಿಭೆಯನ್ನು ಶಿಖರಕ್ಕೇರಿಸಿ ಕೊಂಡಾಡುತ್ತಿದ್ದವರು, ನಾಟಕವನ್ನು ಆಡಿಸುತ್ತಿದ್ದರಾದರೂ, ನಾಟಕಕಾರನ ಹೆಸರನ್ನು ಮರೆಮಾಚುತ್ತಿದ್ದರು. ಆದರೆ ಆಸ್ಕರ್ ವೈಲ್ಡ್‌ನನ್ನು ಅವನ ಪ್ರತಿಭೆಯನ್ನು ಬಹಳವಾಗಿ ಮೆಚಿಕೊಂಡಿದ್ದ ಒಂದಷ್ಟು ಮಂದಿಗೆ ಅವನಿಗಾಗುತ್ತಿದ್ದ ಅವಮಾನವನ್ನು ಸಹಿಸಿಕೊಳ್ಳಲಾಗದೆ, ಅವಮಾನಿಸುವವರ ವಿರುದ್ಧ ಪ್ರತಿಭಟನೆ ನಡೆಸಿದರು; ಚೆನ್ನಾಗಿ ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸುತ್ತಿದ್ದರು. ಹದಿನೆಂಟು ತಿಂಗಳ ಕಾಲ ಜೈಲುವಾಸ ಅನುಭವಿಸಿದ ವೈಲ್ಡ್ ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸಿದ. ಓದಲು, ಬರೆಯಲೂ ಕೂಡಾ ಅವಕಾಶ ಕೊಡದೆ ಒಂಟಿತನದ ಭಯಂಕರತೆಯನ್ನು ಅನುಭವಿಸುವಂತೆ ಮಾಡಲಾಯಿತು. ಕೊನೆಕೊನೆಗೆ ಅವನ ಆಪ್ತರ ಶಿಫಾರಸಿನಿಂದ, ನಿಯಮಗಳನ್ನು ಸಡಿಲಗೊಳಿಸಿ ಓದು, ಬರಹಕ್ಕೆ ಅವಕಾಶ ನೀಡಲಾಯಿತು. ಇದರಿಂದ ಅವನಿಗೆ ಎಷ್ಟೋ ನಿರಾಳವೆನಿಸಿತು.
ಜೈಲುವಾಸದ ಕಡೆಯ ಆರು ತಿಂಗಳಲ್ಲಿ, ವೈಲ್ಡ್ ತನ್ನ ಗೆಳೆಯನೊಬ್ಬನಿಗೆ ಜೈಲುವಾಸದ ಅನುಭವಗಳನ್ನು ಕುರಿತು ಸುದೀರ್ಘ ಪತ್ರ ಬರೆದ. ಈ ಪತ್ರವೇ ಮುಂದೆ ‘ಡಿ ಫ್ರೊಫೆಂಡಿಸ್’ ಹೆಸರಿನಲ್ಲಿ ಪ್ರಕಟವಾಯಿತು. ಅತೀವವಾದ ಯಾತನೆಯ ನಡುವೆ, ಅದು ಹೇಗೋ ಕ್ರಿಸ್ತನ ವ್ಯಕ್ತಿತ್ವದ ಬಗ್ಗೆ ಗಾಢವಾದ ಆಸಕ್ತಿಯನ್ನು ಬೆಳೆಸಿಕೊಂಡ. ಆದರೆ ದುರಾದೃಷ್ಟ! ಜೈಲಿನಿಂದ ಬಿಡುಗಡೆಯಾಗಿ ಬಂದು ಇನ್ನೇನು ರೋಮನ್ ಚರ್ಚ್ ಸಂಪ್ರದಾಯಕ್ಕೆ ದೀಕ್ಷಾಬದ್ಧನಾಗಿ ಸೇರಿಕೊಳ್ಳಬೇಕೆಂದುಕೊಂಡಿರುವಾಗಲೇ ಅದೂ ಕೆಲವೇ ಗಂಟೆಗಳ ಅಂತರದಲ್ಲಿ ಸಾವನ್ನಪ್ಪಿದ.
ಜೈಲು ಬಿಡುಗಡೆಯಾಗಿ ಬಂದು, ಸಾವನ್ನಪ್ಪುವ ಕ್ಷಣದವರೆಗೂ ಕೆಲವು ಕೃತಿಗಳನ್ನು ಬರೆದ. ದಿ ಬ್ಯಾಲಡ್ ಆಫ್ ರೀಡಿಂಗ್ ಗೆಯೋಲ್, ಈ ಕೃತಿಗೆ ಪ್ರಚಂಡವಾದ ಪ್ರೋತ್ಸಾಹ, ಪ್ರತಿಕ್ರಿಯೆಗಳು ಲಭಿಸಿದವು. ‘ಎ ಹೌಸ್ ಆಫ್ ಪಾಮ್‌ಗ್ರೇನೇಟ್ಸ್’ ಲಾರ್ಡ್ ಆರ್ಥರ್ ಸವೈಲ್ಸ್ ಕ್ರೈಮ್, ದಿ ಸೆಲ್ಫಿಷ್ ಜೈಂಟ್, ದಿ ನೈಟಿಂಗೇಲ್ ಅಂಡ್ ದಿ ರೋಸ್, ದಿ ಪೋರ್ಟ್‌ರೈಟ್ ಆಫ್ ಮಿಸ್ಟರ್ ಡಬ್ಲು. ಎಚ್ ಮುಂತಾಗಿ ಹಲವಾರು ಕೃತಿಗಳನ್ನು ಬರೆದ. ೧೮೯೮ರ ನಂತರ ಅವರ ಬರವಣಿಗೆ ಸ್ಥಗಿತವಾಯಿತು. ಬರೆಯಬೇಕೆಂಬ ಇಚ್ಛಾಶಕ್ತಿಯೇ ಬತ್ತಿಹೋಯಿತು.
ಜೈಲುವಾಸದ ಘೋರ ಪರಿಣಾಮವೆಂಬಂತೆ ಪ್ಯಾರಿಸಿನ ರೂ ದೆ ಬೊ ಆರ್ಟ್ಸ್‌ನಲ್ಲಿ ಕೊನೆಯುಸಿರೆಳೆದ. ಇಂತಹ ಬದುಕಿನ ಹಿನ್ನೆಲೆ ಹೊಂದಿದ ಆಸ್ಕರ್ ವೈಲ್ಡ್‌ನ ಕೃತಿ ಸಮೂಹದಲ್ಲಿ ಅತ್ಯಂತ ಮಹತ್ವದ ಕೃತಿಯೆಂದು ಪರಿಗಣಿಸಲಾಗಿರುವ ದಿ ಪಿಕ್ಚರ್ ಆಫ್ ಡೋರಿಯನ್ ಗ್ರೇ ಎಂಬುದು ಅವನು ಬರೆದ ಒಂದೇ ಒಂದು ಕಾದಂಬರಿಯಾಗಿದೆ. ಇಂಗ್ಲೀಷಿನಲ್ಲಿ ಬರೆದ ಮೊಟ್ಟ ಮೊದಲ ಫ್ರೆಂಚ್ ಕಾದಂಬರಿ ಇದಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿಯೇ ಅತ್ಯಂತ ಭಿನ್ನ ನೆಲೆಯ ಕೃತಿಯಾಗಿದ್ದು, ಸಾಕಷ್ಟು ಸಂಚಲನ ಉಂಟುಮಾಡಿದ ಈ ಕೃತಿ ಮೂಲತಃ ಆಸ್ಕರ್ ವೈಲ್ಡ್‌ನ ಸಮಗ್ರ ವ್ಯಕ್ತಿತ್ವದ ಅಭಿವ್ಯಕ್ತಿಯಾಗಿದೆ. ಆದ್ದರಿಂದಲೇ ಇದೊಂದು, ಕುತೂಹಲದ ಮಾನವ ದಾಖಲೆಯ ಮಹತ್ವವನ್ನು ಪಡೆದಿದೆ. ಆಸ್ಕರ್ ವೈಲ್ಡ್‌ನ ಸಾವಿರಾರು ಹೇಳಿಕೆಗಳಲ್ಲಿ ಒಂದಾದ “ಮನುಷ್ಯನಿಗೆ ಮುಖವಾಡವನ್ನು ನೀಡು, ಅವನು ಸತ್ಯವನ್ನೇ ಹೇಳುತ್ತಾನೆ” ಎನ್ನುವುದು ಅವನ ನಂಬಿಕೆಯಾಗಿತ್ತು. ಈ ಕಾದಂಬರಿಯಲ್ಲಿ ಬರುವ ಹೆನ್ರಿ ಓಟ್ಸನ್ ಪಾತ್ರ ಆಸ್ಕರ್ ವೈಲ್ಡ್‌ನ ಮುಖವಾಡವೇ ಆಗಿದೆ. ಒಂದು ರೀತಿಯಲ್ಲಿ ಈ ಕಾದಂಬರಿ ವೈಲ್ಡ್‌ನ ಪೂರ್ಣ ಪ್ರಮಾಣದ ಭಾವಚಿತ್ರವೇ ಆಗಿದೆ.

ಕಾಮೆಂಟ್‌ಗಳು